ADVERTISEMENT

ಆಸ್ಪತ್ರೆಯಿಂದ ಮನೆಗೆ: ಇದು ನನಗೆ ಮೂರನೇ ಜನ್ಮ ಎಂದ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 9:35 IST
Last Updated 3 ಸೆಪ್ಟೆಂಬರ್ 2023, 9:35 IST
<div class="paragraphs"><p>ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಎಚ್‌.ಡಿ ಕುಮಾರಸ್ವಾಮಿ ಮಾತನಾಡಿದರು.</p></div>

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಎಚ್‌.ಡಿ ಕುಮಾರಸ್ವಾಮಿ ಮಾತನಾಡಿದರು.

   

ಬೆಂಗಳೂರು: ಲಘು ಪಾರ್ಶ್ವವಾಯುವಿಗೆ ಒಳಗಾಗಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಗುಣಮುಖರಾಗಿದ್ದು, ಇಲ್ಲಿನ ಜಯನಗರದ ಅಪೋಲೊ ಆಸ್ಪತ್ರೆಯಿಂದ ಭಾನುವಾರ ಮನೆಗೆ ಮರಳಿದರು.

ತೀವ್ರ ಜ್ವರದಿಂದ ಬಳಲುತ್ತಿದ್ದ ಕುಮಾರಸ್ವಾಮಿ ಅವರನ್ನು ಆಗಸ್ಟ್‌ 30ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಲಘು ಪಾರ್ಶ್ವವಾಯು ಆಗಿರುವುದು ವೈದ್ಯಕೀಯ ಪರೀಕ್ಷೆಗಳ ಬಳಿಕ ಗೊತ್ತಾಗಿತ್ತು. ತೀವ್ರನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ADVERTISEMENT

ಆಸ್ಪತ್ರೆಯಿಂದ ಮನೆಗೆ ಮರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ ದಿನ ಬಿಡದಿಯ ತೋಟದ ಮನೆಯಲ್ಲಿದ್ದೆ. ತಡ ರಾತ್ರಿ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿತು. ತಕ್ಷಣ ಡಾ.ಸಿ.ಎನ್‌. ಮಂಜುನಾಥ್‌ ಅವರಿಗೆ ಕರೆಮಾಡಿ ಮಾತನಾಡಿದೆ. ಅವರ ಸಲಹೆಯಂತೆ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದೆ. 20 ನಿಮಿಷಗಳಲ್ಲೇ ಆಸ್ಪತ್ರೆ ತಲುಪಿದ್ದೆ. ಆ ದಿನ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರೆ ನಾನು ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗುತ್ತಿತ್ತು’ ಎಂದರು.

‘ಎಲ್ಲರ ಕುಟುಂಬದಲ್ಲೂ ಈ ರೀತಿಯ ಅನಾರೋಗ್ಯದ ಸಮಸ್ಯೆಗಳಿರುತ್ತವೆ. ಅದು ಗಮನಕ್ಕೆ ಬರುತ್ತಿದ್ದಂತೆ ಆಸ್ಪತ್ರೆಗೆ ತೆರಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬೇಡಿ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ಇದು ನನಗೆ ಮೂರನೇ ಜನ್ಮ’ ಎಂದು ಹೇಳಿದರು.

ಅಪೋಲೊ ಆಸ್ಪತ್ರೆಯ ನರರೋಗ ತಜ್ಞ ಡಾ. ಸತೀಶ್‌ ಚಂದ್ರ, ಉಪಾಧ್ಯಕ್ಷ ಡಾ. ಗೋವಿಂದಯ್ಯ ಯತೀಶ್‌ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಕುಮಾರಸ್ವಾಮಿ ಅವರ ಮಗ ನಿಖಿಲ್‌ ಆಸ್ಪತ್ರೆಯಿಂದ ತಂದೆಯನ್ನು ಮನೆಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.