ADVERTISEMENT

ಕುಟುಂಬಸ್ಥರ ಸ್ಪರ್ಧೆಗೆ ಅವಕಾಶವಿಲ್ಲ, ಸ್ಥಳೀಯರಿಗಷ್ಟೇ ಟಿಕೆಟ್‌: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 14:59 IST
Last Updated 23 ಸೆಪ್ಟೆಂಬರ್ 2019, 14:59 IST
   

ಬೆಂಗಳೂರು: ಉಪ ಕದನವೇ ಆಗಲಿ, ದೊಡ್ಡ ಕದನವೇ ಆಗಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,ಆಪರೇಷನ್ ಕಮಲದ 2ನೇ ಆವೃತ್ತಿಯಿದು. ಅಧಿಕಾರಕ್ಕಾಗಿ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ಬಂದಿದೆ.ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ. ಎಲ್ಲ ಜಿಲ್ಲೆಗಳ ಮುಖಂಡರ ಸಭೆಯನ್ನು ಈಗಾಗಲೇ ಜೆಡಿಎಸ್ ವರಿಷ್ಠರು ಮಾಡಿದ್ದಾರೆ.ಇನ್ನು ಎರಡು ದಿನಗಳಲ್ಲಿ ಎಲ್ಲ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು.ದೇವೇಗೌಡರ ಕುಟುಂಬ ಈವರೆಗೆ ಅನುಭವಿಸಿರುವ ನೋವು ಸಾಕು. ಕೆಲವು ಮಾಧ್ಯಮಗಳಲ್ಲಿ ಗೌಡರ ಕುಟುಂಬದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಸುದ್ದಿಯಾಗಿದೆ.ಒತ್ತಡ ಇದ್ದರೂ ಸ್ಥಳಿಯರಿಗೇ ಟಿಕೆಟ್ ಕೊಡುತ್ತೇವೆ. ಸಾಮಾನ್ಯ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಉಪ ಕದನವಾಗಲಿ,ದೊಡ್ಡ ಕದನವಾಗಲಿ ನಮ್ಮ ಕುಟುಂಬದಿಂದಸ್ಪರ್ಧೆ ಮಾಡುವುದಿಲ್ಲ.ಸ್ವತಂತ್ರವಾಗಿಸ್ಪರ್ಧಿಸಿದ ರಾಷ್ಟ್ರೀಯ ಪಕ್ಷಗಳಿಗಿಂತಲೂ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಶಕ್ತಿ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೆರವು ನೀಡಿ ಹೃದಯ ವೈಶಾಲ್ಯ ಮೆರೆದೆವು. ಆದ್ರೆ ಕಾಂಗ್ರೆಸ್‌ನಿಂದ ಸಹಾಯ ಸಿಗಲಿಲ್ಲ. ಹೀಗಾಗಿ ಯಾರ ಸಹವಾಸವೂ ಬೇಡ ಎಂದು ಸ್ವತಂತ್ರವಾಗಿಯೇ ನಾವು ಉಪ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ADVERTISEMENT

’ಮೈಸೂರು ಕ್ಷೇತ್ರ ಸೋಲಲು ಸಿದ್ದರಾಮಯ್ಯ ಅವ್ರ ಸ್ವಯಂಕೃತ ಅಪರಾಧವೇ ಕಾರಣ. ನಿನ್ನೆ ಅವರು ಸ್ವಾಭಿಮಾನದ ಭಾಷಣ ಮಾಡಿದ್ದಾರೆ.ಇವತ್ತು ಮಂಡ್ಯದಲ್ಲಿ ಲಕ್ಷಾಂತರ ರೈತರಕಬ್ಬು ಮಾರಾಟವಾಗದೆ ಬೇಸತ್ತಿದ್ದಾರೆ.ಸ್ವಾಭಿಮಾನದ ಹೆಸರು ಹೇಳಿದವರು ಈಗ ಎಲ್ಲಿ ಹೋಗಿದ್ದಾರೆ. ಸಿದ್ದರಾಮಯ್ಯ ಈಗ ಏನು ಮಾಡುತ್ತಿದ್ದಾರೆ.ಇವರ ನಾಟಕಗಳೆಲ್ಲವೂ ನನಗೆ ಗೊತ್ತಿದೆ.ಮಂಡ್ಯದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದರ ಅರಿವು ನನಗಿದೆ,’ ಎಂದು ಹೇಳಿದರು.

‘ಲೋಕಸಭೆ ಚುನಾವಣೆ ಸೋಲಿಗೆ ಕಾಂಗ್ರೆಸ್ ಸ್ಥಳೀಯ ನಾಯಕರು, ಸಿದ್ದರಾಮಯ್ಯ ಅವರೇ ಕಾರಣ. ಮಂಡ್ಯ ಸೋಲು, ದೇವೇಗೌಡರ ಸೋಲು, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಅವರೇ ಕಾರಣ,’ ಎಂದೂ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.