ADVERTISEMENT

ಇರೋ ಸಮಸ್ಯೆ ಬಗೆಹರಿಸುವುದು ಬಿಟ್ಟು, ಬಿಜೆಪಿ ಹೊಸ ಸಮಸ್ಯೆ ಸೃಷ್ಟಿಸಿದೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 9:43 IST
Last Updated 18 ಡಿಸೆಂಬರ್ 2019, 9:43 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ‘ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅದನ್ನು ಬಗೆಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರ ಹೊಸ ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಮಸೂದೆಗಳನ್ನು ಸದನಗಳಲ್ಲಿ ಮಂಡಿಸಿದಾಗ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಹಿಂದೂ ರಾಷ್ಟ್ರ ಮಾಡುತ್ತಿದ್ದೇವೆ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಬರಬೇಕು ಎಂದು ಬಿಜೆಪಿ ಈ ರೀತಿ ವಿವಾದ ಸೃಷ್ಟಿಸುತ್ತಿದೆ’ ಎಂದು ದೂರಿದರು.

‘ನಮ್ಮ ದೇಶಕ್ಕೆ ಅದರದ್ದೆ ಆದ ಇತಿಹಾಸವಿದೆ. ಬಹುಧರ್ಮಗಳ ದೇಶ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಅಂಬೇಡ್ಕರ್‌ ಸಂವಿಧಾನ ರಚಿಸಿದ್ದಾರೆ. ನಾನು ಸಾವರ್ಕರ್ ಬಗ್ಗೆ ಮಾತನಾಡಲ್ಲ. ಏಕೆಂದರೆ, ಆಗ ನಾನು ಹುಟ್ಟಿರಲಿಲ್ಲ‌‘ ಎಂದು ಹೇಳಿದರು.

ADVERTISEMENT

‘ವಲಸೆ ಎನ್ನುವುದು ಕೇವಲ ಭಾರತದ ಸಮಸ್ಯೆಯಲ್ಲ. ವಿಶ್ವದೆಲ್ಲೆಡೆ ಈ ಸಮಸ್ಯೆ ಇದೆ. ದೇಶದಲ್ಲಿರುವ ಪ್ರತಿಯೊಬ್ಬ ನಾಗರೀಕನ ರಕ್ಷಣೆ ಸರ್ಕಾರದ ಕರ್ತವ್ಯ’ ಎಂದರು.

‘ರಾಜ್ಯದಲ್ಲಿ ಜನವರಿಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಕಾಯ್ದೆ ಜಾರಿಗೆ ಇನ್ನೂ ಯೋಚಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಅವರು ಏಕೆ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಸಿಎಎ ಮತ್ತು ಎನ್‌ಆರ್‌ಸಿ ದೇಶದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಹಾಗಾಗಿ ನಮ್ಮ ಪಕ್ಷ ಅವುಗಳ ಜಾರಿಯನ್ನು ಖಂಡಿಸುತ್ತದೆ‘ ಎಂದರು.

ಪ್ರತಿ ರಾಜ್ಯದಲ್ಲೂ ಭಿನ್ನ ಸಮಸ್ಯೆಗಳಿರುತ್ತವೆ. ಅಸ್ಸಾಂನ ಸಮಸ್ಯೆಯೇ ಬೇರೆ, ತ್ರಿಪುರದ ಮೂಲ ನಿವಾಸಿಗಳ ಸಮಸ್ಯೆಯೇ ಬೇರೆ. ಅಂತಹ ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಬಿಟ್ಟು, ಕೇಂದ್ರ ಸರ್ಕಾರ ಅನಗತ್ಯ ವಿಚಾರಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ’ ಎಂದು ತಿಳಿಸಿದರು.

ಚುನಾವಣೆಯಲ್ಲಿ ಸೋಲು ಗೆಲವು ಸಹಜ

‘ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲುವು ಸಾಧಿಸುವುದು ಸಹಜ. ಕಳೆದ ಬಾರಿ ಗುಂಡ್ಲುಪೇಟೆ , ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದಿದ್ದಿತ್ತು. ಆದಾದ ನಂತರದ ಚುನಾವಾಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್‌ಗೆ ಸೋಲಾಯಿತು’ ಎಂದು ನೆನಪಿಸಿಕೊಂಡರು.

‘ಸುಭದ್ರ ಸರ್ಕಾರ ಬಯಸಿ ಜನ ಬಿಜೆಪಿಗೆ ಮತ ನೀಡಿದ್ದಾರೆ. ಈಗ ಬಿಜೆಪಿಯವರು ಗೆದ್ದಿದ್ದಾರೆ. ಮುಂದೆ ಯಾರು ಗೆಲ್ಲುತ್ತಾರೊ ನೋಡಬೇಕು. ಕಮಲ ಇಂದು ಅರಳಿದೆ ಮುಂದೆ ಮುದುಡಬಹುದು. ಇದು ನಡಿತಾ ಇರುತ್ತೆ’ ಎಂದು ಹೇಳಿದರು.

ಏನಾದ್ರು ಹೆಸರಿಡಲಿ

‘ಕ್ಯಾಂಟೀನ್‌ಗೆ ಇಂದಿರಾ ಅಂತಾದ್ರು ಇಡಲಿ, ವಾಜಪೇಯಿ ಅಂತಾದ್ರು ಹೆಸರಿಡಲಿ. ಅದರ ಬಗ್ಗೆ ನಾನು ತಲೆ ಕೇಡಿಸಿಕೊಳ್ಳೊದಿಲ್ಲ. ರಾಜ್ಯದಲ್ಲಿ ಅನೇಕ ಕಡೆ ಕಬ್ಬು ಕಟಾವು ಮಾಡದೆ ಒಣಗುತ್ತಿದೆ. ಅದರ ಬಗ್ಗೆ ಚರ್ಚೆ ಮಾಡಿ. ಹೆಸರಿನ ವಿಚಾರಕ್ಕೆ ನಾನು ರಾಜಕೀಯ ಮಾಡುವುದಿಲ್ಲ’ ಎಂದರು.

‘ನನಗೆ ಜನರು ವಿಶ್ರಾಂತಿ ಕೊಟ್ಟಿದ್ದಾರೆ. ಪುಸ್ತಕ ಓದೋಕೆ ಸಮಯ ಕೊಟ್ಟಿದ್ದಾರೆ. ಯಾವ ಶಾಸಕರು ಜೆಡಿಎಸ್ ತೊರೆಯುವುದಿಲ್ಲ. ನನ್ನ ಷಷ್ಠಿ ಪೂಜೆಗೆ ಜಿ.ಟಿ. ದೇವೇಗೌಡರು ಬಿಟ್ಟು ಎಲ್ಲರೂ ಬಂದಿದ್ದಾರೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರ ಸುಭದ್ರವಾಗಿರಲಿ ಎಂದು ನಾನೂ ಆಸೆ ಪಡುತ್ತೀನಿ. ನಾನಂತೂ ಯಾವುದೇ ಶಾಸರಕನ್ನು ಖರೀದಿ ಮಾಡಿ ಸರ್ಕಾರಕ್ಕೆ ತೊಂದರೆ ಕೊಡುವುದಿಲ್ಲ. ಆಪರೇಷನ್‌ ಏನಿದ್ದರೂ ಬಿಜೆಪಿಯವರ ಸಂಸ್ಕೃತಿ, ಅವರೇ ಅದನ್ನು ಮಾಡಲಿ’ ಎಂದು ಟಾಂಗ್ ನೀಡಿದರು.

ಜಿ.ಟಿ ದೇವೇಗೌಡಗೆ ಕುಮಾರಸ್ವಾಮಿ ಟೀಕೆ

‘ಪಕ್ಷದ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡುತ್ತಾರೆ. ಪಕ್ಷದಿಂದ ಅವರು ಏನೂ ಸಹಾಯ ತೆಗೆದುಕೊಂಡಿಲ್ಲ ಎಂದು ಅವರು ಹೇಳಲಿ. ನನ್ನಿಂದ ಅವರಿಗೆ ಸ್ವಲ್ಪವೂ ಅನುಕೂಲ ಆಗಿಲ್ಲವೇ?’ ಎಂದು ಟೀಕಿಸಿದರು.

ನೂತನ ಶಾಸಕರು ಸಿದ್ದರಾಮಯ್ಯ ಭೇಟಿ ಮಾಡಿದ್ದರ ಬಗ್ಗೆ ಮಾತನಾಡಿದ ಅವರು, ’ಆಸ್ಪತ್ರೆಗೆ ಹೋಗಿ ಭೇಟಿ ಮಾಡಿ ನೀವೆ ನಮ್ಮ ಗುರುಗಳು ಅಂತಾ ಹೇಳುತ್ತಾರೆ. ಅವರೇ, ಟೋಪಿ ಹಾಕಿ ಹೊಗಿದ್ದು ಗೊತ್ತಿಲ್ವೆ..?’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.