ಬೆಂಗಳೂರು: ‘ಕೇತಗಾನಹಳ್ಳಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಮನಗರ ತಹಶೀಲ್ದಾರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿರುವ ನೋಟಿಸ್ ಅನುಸಾರ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು’ ಎಂಬ ಈ ಹಿಂದಿನ ಆದೇಶವನ್ನು ಪುನಃ ವಿಸ್ತರಿಸಿರುವ ಹೈಕೋರ್ಟ್ ಈ ಸಂಬಂಧ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಈ ಕುರಿತಂತೆ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕುಮಾರಸ್ವಾಮಿ ಪರ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರು ‘ತಹಶೀಲ್ದಾರ್ ವಿಚಾರಣೆ ನಡೆಸದೆಯೇ ವರದಿ ಸಲ್ಲಿಸಿದ್ದಾರೆ. ಅಂತೆಯೇ ರಿಟ್ ಅರ್ಜಿಯಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ತಿದ್ದುಪಡಿ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಹೀಗಾಗಿ ಮೂಲ ಅರ್ಜಿಯ ಮೇಲೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಿ’ ಎಂದು ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಅವರಿಗೆ ಸೂಚಿಸಿತು.
ಇದೇ ವೇಳೆ ‘ಸಮಾಜ ಪರಿವರ್ತನಾ ಸಮುದಾಯ’ದ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಎಸ್.ಬಸವರಾಜು ‘ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ದೂರುದಾರರಾಗಿದ್ದೇವೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 4ಕ್ಕೆ ಮುಂದೂಡಿತು. ಕುಮಾರಸ್ವಾಮಿ ಪರ ಹೈಕೋರ್ಟ್ ವಕೀಲ ಎ.ವಿ.ನಿಶಾಂತ್ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.