ADVERTISEMENT

ಅಧಿಕಾರ ದುರುಪಯೋಗಕ್ಕೆ ಸಮಯ ತಳ್ಳಿದರು– ಡಿಕೆಶಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 20:35 IST
Last Updated 29 ಮಾರ್ಚ್ 2023, 20:35 IST
   

ಬೆಂಗಳೂರು: ‘ಈ ಹಿಂದೆಯೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿ ಆಗಬೇಕಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಇಷ್ಟು ದಿನ ಕಾಲ ಸಮಯ ತಳ್ಳಿದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಚುನಾವಣೆಗೆ ದಿನಾಂಕ ಘೋಷಿಸಿದ ಬೆನ್ನಲ್ಲೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೇ 10 ಕೇವಲ ಮತದಾನದ ದಿನವಲ್ಲ, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಡಿದೋಡಿಸುವ ಪವಿತ್ರ ದಿನ. ಫೇಲಾದ ಎರಡೂ ಎಂಜಿನ್‌ಗಳ ಬದಲಿಗೆ ಜನರೇ ಹೊಸ ಎಂಜಿನ್ ನಿರ್ಮಾಣ ಮಾಡುವ ದಿನ’ ಎಂದು ವಿಶ್ಲೇಷಿಸಿದರು.

‘ರಾಜ್ಯದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಸುವ ಆಯೋಗದ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆಯೋಗ ಈ ಬಾರಿ ಸಾಕಷ್ಟು ಸುಧಾರಣೆಗಳನ್ನು ತರಲು ನಿರ್ಧರಿಸಿದ್ದು, ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಕಳೆದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್ ಸರ್ಕಾರದ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಇದಕ್ಕೆ ಜನ ಅಂತ್ಯವಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಚುನಾವಣಾ ಆಯೋಗ ಹೊಸ ಬದಲಾವಣೆ ತರುವ ಬಗ್ಗೆ ಕೇಳಿದಾಗ, ‘ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಗುಜರಾತ್ ಚುನಾವಣೆಯಲ್ಲಿ ಬಳಸಿದ ಮತಯಂತ್ರ ಬಳಸಬಾರದು ಎಂದು ಮನವಿ ಮಾಡಿದ್ದೆವು. ಚುನಾವಣೆ ಸಮಯದಲ್ಲಿ ಬೂತ್ ಆರಂಭವಾಗುವ ಮೊದಲು ಎಲ್ಲ ಪಕ್ಷದ ಬೂತ್ ಏಜೆಂಟರಿಗೆ 50 ಮತ ಹಾಕಿ ಪ್ರಯೋಗ ಮಾಡಿ ಮತದಾನ ಆರಂಭಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುತ್ತೇವೆ’ ಎಂದರು.

ತುರ್ತು ಪ್ರಸ್ತಾವಕ್ಕೆ ಸೂಚನೆ

ಬೆಂಗಳೂರು: ಚುನಾವಣಾ ನೀತಿಸಂಹಿತೆಯಿಂದ ವಿನಾಯಿತಿ ಪಡೆಯಲು ತುರ್ತು ಪ್ರಸ್ತಾವಗಳನ್ನು ಮಾತ್ರ ತಮ್ಮ ನೇತೃತ್ವದ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ. ನೀತಿಸಂಹಿತೆಯ ಉಲ್ಲಂಘನೆ ಆಗದಂತೆ ವಿವಿಧ ಇಲಾಖೆಗಳು ಎಚ್ಚರಿಕೆ ವಹಿಸಬೇಕು. ನೀತಿಸಂಹಿತೆ ವಿನಾಯ್ತಿ ಬೇಕಿರುವ ಪ್ರಸ್ತಾವಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿ, ಅನುಮತಿ ಪಡೆಯಬೇಕು. ಮುಖ್ಯ ಕಾರ್ಯದರ್ಶಿ ನೇತೃತ್ವದ ಪರಿಶೀಲನಾ ಸಮಿತಿ ಅಂತಹ ಪ್ರಸ್ತಾವಗಳನ್ನು ಪರಿಶೀಲಿಸಿ ಆಯೋಗಕ್ಕೆ ಕಳುಹಿಸಬೇಕಾಗುತ್ತದೆ. ತುರ್ತು ಪ್ರಸ್ತಾವಗಳಿದ್ದರೆ, ಸೂಕ್ತ ಸಮರ್ಥನೆಗಳೊಂದಿಗೆ ಸಲ್ಲಿಸಬೇಕು ಎಂದು ಬುಧವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.