ADVERTISEMENT

ಎನ್‌ಎಂಸಿ ಹೆಲ್ತ್‌ ಮುಖ್ಯಸ್ಥನ ಸ್ಥಾನಕ್ಕೆ ಬಿ.ಆರ್‌.ಶೆಟ್ಟಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 21:14 IST
Last Updated 19 ಫೆಬ್ರುವರಿ 2020, 21:14 IST
ಬಿ.ಆರ್. ಶೆಟ್ಟಿ
ಬಿ.ಆರ್. ಶೆಟ್ಟಿ   

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್‌.ಶೆಟ್ಟಿ ಅವರು, ಅಬುದಾಭಿಯಲ್ಲಿ ಕಾರ್ಯನಿರ್ವಹಿಸುವ ತಮ್ಮದೇ ‘ಎನ್‌ಎಂಸಿ ಹೆಲ್ತ್‌’ ಕಂಪನಿಯ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿ.ಆರ್‌.ಶೆಟ್ಟಿ ಸಮೂಹ ಸಂಸ್ಥೆಗಳ ಷೇರು
ಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಫೆಬ್ರುವರಿ ಎರಡನೇ ವಾರದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದರು. ಆನಂತರ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಆಡಳಿತ ಮಂಡಳಿಯಿಂದ ಇನ್ನೂ ಮೂವರು ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಎನ್‌ಎಂಸಿ ಹೆಲ್ತ್‌ ಸಂಸ್ಥೆಯ ಹಣಕಾಸು ವ್ಯವಹಾರ ಪಾರದರ್ಶಕವಾಗಿಲ್ಲ ಮತ್ತು ಸಾಕಷ್ಟು ಅವ್ಯವಹಾರ ನಡೆದಿದೆ. ಎಂದು ಷೇರು ಹೂಡಿಕೆ ಸಲಹಾ ಸಂಸ್ಥೆ ‘ಮಡ್ಡಿ ವಾಟರ್ಸ್‌’ 2019ರ ಡಿಸೆಂಬರ್‌ನಲ್ಲಿ ವರದಿ ಪ್ರಕಟಿಸಿತ್ತು. ಆನಂತರ ಬಿ.ಆರ್‌.ಶೆಟ್ಟಿ ಅವರ ಕಂಪನಿಗಳ ಷೇರುಗಳ ಮೌಲ್ಯವು ಶೇ 40ಕ್ಕೂ ಹೆಚ್ಚು ಕುಸಿತ ಕಂಡಿದ್ದವು.

ADVERTISEMENT

ಕಂಪನಿಯ ಸ್ವತ್ತುಗಳ ಮೌಲ್ಯವನ್ನು ಹೆಚ್ಚು ಎನ್ನುವಂತೆ ತೋರಿಸಲಾಗಿದೆ. ಆದರೆ, ಅವುಗಳ ಮೌಲ್ಯ ಕಡಿಮೆ ಇದೆ. ಬೇರೆ ಆಸ್ಪತ್ರೆಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಬಾರಿ ಅಧಿಕ ಬೆಲೆಯಲ್ಲಿ ಖರೀದಿಸಲಾಗಿದೆ. ಸಾಲ ಪಡೆಯಲು ಕಂಪನಿಯ ಷೇರುಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡಮಾನ ಇಡಲಾಗಿದೆ. ಆದರೆ, ಸಾಲ ಮತ್ತು ಷೇರುಗಳನ್ನು ಅಡಮಾನ ಇಟ್ಟಿರುವ ವಿಚಾರವನ್ನು ಮುಚ್ಚಿಡಲಾಗಿದೆ ಎಂದು ಮಡ್ಡಿ ವಾಟರ್ಸ್‌ ವರದಿ ಮಾಡಿತ್ತು.

ಕಂಪನಿಯ ಲೆಕ್ಕಪರಿಶೋಧನಾ ವರದಿಯೂ, ಅವ್ಯವಹಾರದ ಬಗ್ಗೆ ಸುಳಿವು ನೀಡಿತ್ತು. ಇದರ ಬೆನ್ನಲ್ಲೇ ಅವರ ರಾಜೀನಾಮೆಗೆ ಆಡಳಿತ ಮಂಡಳಿ ಸದಸ್ಯರು ಒತ್ತಾಯಿಸಿದ್ದರು.

ಎನ್‌ಎಂಸಿ ಹೆಲ್ತ್‌ ಷೇರುಗಳನ್ನು ಅಡಮಾನ ಇರಿಸಿಕೊಂಡಿದ್ದ ಫರ್ಸ್ಟ್ ಅಬುದಾಭಿ ಬ್ಯಾಂಕ್‌, ಅವುಗಳನ್ನು ಈಚೆಗೆ ಮಾರಾಟ ಮಾಡಿದೆ. ಇದೇ ರೀತಿ ಷೇರುಗಳನ್ನು ಅಡಮಾನ ಇರಿಸಿಕೊಂಡಿದ್ದ ಬೇರೆ ಬ್ಯಾಂಕ್‌ಗಳೂ ಇದೇ ಹಾದಿ ಅನುಸರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.