ಬೆಂಗಳೂರು: ತಾಯಿ ಮಕ್ಕಳ ಆರೋಗ್ಯ ರಕ್ಷಣೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಂತ್ರಜ್ಞಾನಗಳ ಅಳವಡಿಕೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಇನ್ಫೊಸಿಸ್ ಫೌಂಡೇಶನ್ ಹಾಗೂ ಸಿ. ಕ್ಯಾಂಪ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಭಾಗವಾಗಿ ಧಾರವಾಡ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಜಿಲ್ಲಾಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಭ್ರೂಣ ನಿಗಾ ತಂತ್ರಜ್ಞಾನ ಮತ್ತು ಸಿಪಿಎಪಿ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ.
‘ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭವಾಗಿದೆ. ಹಂತ ಹಂತವಾಗಿ ನಾಲ್ಕು ವರ್ಷಗಳಲ್ಲಿ ಒಟ್ಟು ಎಂಟು ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ನಡೆಯಲಿದೆ. ಎರಡೂ ತಂತ್ರಜ್ಞಾನಗಳು ತಾಯಿ–ಮಕ್ಕಳ ಆರೋಗ್ಯದ ಜತೆಗೆ ನವಜಾತ ಶಿಶುಗಳ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿವೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
‘ಭ್ರೂಣ ನಿಗಾ ತಂತ್ರಜ್ಞಾನವು ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಗೆ ಹೆಚ್ಚು ಸಹಕಾರಿಯಾಗಿದೆ. ಸಿಪಿಎಪಿ ತಂತ್ರಜ್ಞಾನವು ಉಸಿರಾಟದ ಸಮಸ್ಯೆ ಹೊಂದಿರುವ ನವಜಾತ ಶಿಶುಗಳ ಆರೈಕೆಗೆ ಅನುಕೂಲ ಕಲ್ಪಿಸಲಿದೆ’ ಎಂದರು.
‘ಶಿಶು ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು ನಮ್ಮ ಗುರಿಯಾಗಿದೆ. ಹೀಗಾಗಿ, ಹೊಸ ಹೊಸ ತಂತ್ರಜ್ಞಾನಗಳನ್ನ ಆರೋಗ್ಯ ಇಲಾಖೆಯು ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಅಳವಡಿಸುತ್ತಿದೆ. ಈ ತಂತ್ರಜ್ಞಾನವು ಒಂದು ಲಕ್ಷಕ್ಕೂ ಹೆಚ್ಚು ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಗೆ ಅನುಕೂಲವಾಗಲಿದ್ದು, ಸಾವಿರಾರು ನವಜಾಥಾ ಶಿಶುಗಳ ಆರೋಗ್ಯ ಆರೈಕೆಗೆ ಸಹಕಾರಿಯಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.