
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಡತಗಳನ್ನು ತಡವಾಗಿ ಮಂಡಿಸುತ್ತಿರುವ ಕಾರಣ ಸಕಾಲದಲ್ಲಿ ನಿರ್ಣಯ ಕೈಗೊಳ್ಳಲು ವಿಳಂಬವಾಗುತ್ತಿದೆ. ಹಾಗಾಗಿ ಹೆಚ್ಚುವರಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇಮಿಸಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಕೋರಿದ್ದಾರೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವ ಗುಪ್ತ, ಇಲಾಖೆಯ ಸಚಿವಾಲಯದಲ್ಲಿ ಸೇವಾ ವಿಷಯಗಳನ್ನು ನಿರ್ವಹಿಸುವ ಶಾಖೆಗೆ ಸಮರ್ಥ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಬೇಕು. ಉಪ ಕಾರ್ಯದರ್ಶಿ ಮಟ್ಟದ ಹುದ್ದೆಯಲ್ಲಿ ಶಾಖಾಧಿಕಾರಿಯಾಗಿ ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಧಿಕಾರಿಗಳನ್ನು ನೇಮಿಸಬೇಕು. ಅಲ್ಲದೇ ಇಲಾಖೆಗೆ ಹೆ್ಚುವರಿ ಕಾರ್ಯದರ್ಶಿ ಮಟ್ಟದ ಒಂದು ಹುದ್ದೆ ಸೃಜಿಸಿ, ಐಎಎಸ್ ಅಥವಾ ಹಿರಿಯ ಕೆಎಎಸ್ ಅಧಿಕಾರಿಯನ್ನು ನಿಯೋಜಿಸಲು ತುರ್ತು ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವಾಲಯದ ಸಮಗ್ರ ಪುನರ್ ರಚನೆ ಅಗತ್ಯವಿದೆ. ಉನ್ನತ ಸ್ಥಾನದಲ್ಲಿರುವ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಕೆಲವು ಪ್ರಮುಖ ಇಲಾಖೆಗಳಲ್ಲಿನ ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹುದ್ದೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸಬೇಕು. ಸಿಬ್ಬಂದಿ ಕಾರ್ಯಕ್ಷಮತೆ ಪರಿಶೀಲಿಸಲು ಪರಿಶೀಲನಾ ತಂಡಗಳನ್ನು ರಚಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.