ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಮಾಡಿಸಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿ ಹಾಗೂ ಅನಿರೀಕ್ಷಿತವಾಗಿ ಬಂದೊದಗಬಹುದಾದ ವೈದ್ಯಕೀಯ ವೆಚ್ಚದಿಂದ ಪೋಷಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ವಿಮೆ ಮಾಡಿಸುವ ನಿಧಾರವನ್ನು ಸಭೆ ಕೈಗೊಂಡಿದೆ.
ವಿದ್ಯಾರ್ಥಿಗಳಿಂದ ಪಡೆಯುವ ವಾರ್ಷಿಕ ಶುಲ್ಕದ ಜೊತೆಗೇ ವಿಮೆಯ ಶುಲ್ಕವನ್ನೂ ಸೇರಿಸಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ರೀತಿ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನ ಸುರಕ್ಷಾ ಯೋಜನೆಯಡಿ ವಿಮೆಗೆ ಕಡ್ಡಾಯವಾಗಿ ನೋಂದಾಯಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಪಾವನ ಕುಟುಂಬಕ್ಕೆ ₹3 ಲಕ್ಷ ನೆರವು: ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಎಚ್.ಎನ್.ಪಾವನ ಫೆ.3ರಂದು ವಿಶ್ವವಿದ್ಯಾಲಯದ ವಸತಿನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪಾವನ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದ್ದು, ಸೂಕ್ತ ಪರಿಹಾರ ನೀಡುವಂತೆ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕುಲಪತಿ ಜಯಕರ್ ಅವರು, ಸಿಂಡಿಕೇಟ್ ಸಭೆಯ ಅನುಮೋದನೆಯಂತೆ ಪಾವನ ಕುಟುಂಬಕ್ಕೆ ‘ಕುಲಪತಿ ವಿವೇಚನಾ ವಿದ್ಯಾರ್ಥಿ ನಿಧಿ’ ಅಡಿಯಲ್ಲಿ ₹3 ಲಕ್ಷ ಪರಿಹಾರ ನೀಡಿದ್ದಾರೆ.
ಸಿಂಡಿಕೇಟ್ ಸಭೆಯಲ್ಲಿ ಈ ಪ್ರಕರಣದ ಕುರಿತು ಚರ್ಚೆ ನಡೆಯಿತು. ಇಂಥ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡೇ ವಿದ್ಯಾರ್ಥಿಗಳಿಗೆ ಆರೋಗ್ಯ, ಅಪಘಾತ, ಜೀವ ವಿಮೆಗಳನ್ನು ನೋಂದಾಯಿಸಲು ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳುತ್ತಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ ಹಿಂದುಳಿಗ ವರ್ಗದವರಾಗಿದ್ದು ಅವರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ವಿಮೆ ಮಾಡಿಸುವುದು ತೀರ ಕಷ್ಟಕರವಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯ ಹಣ ವ್ಯಯಿಸುವುದೂ ಕಷ್ಟ. ಹಾಗಾಗಿ ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಮೆ ಮಾಡಿಸಲು ಸೂಚಿಸಲಾಗಿದೆ.-ಜಯಕರ ಎಸ್.ಎಂ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.