ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು: ಸಚಿವ ಡಾ.ಕೆ. ಸುಧಾಕರ್‌

ಗುಜರಾತ್‌ ಮಾದರಿ ಅನುಕರಣೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 20:52 IST
Last Updated 29 ಡಿಸೆಂಬರ್ 2020, 20:52 IST
ಶಿವಾಜಿನಗರದಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡದ ಹೊರನೋಟ –ಪ್ರಜಾವಾಣಿ ಚಿತ್ರ
ಶಿವಾಜಿನಗರದಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡದ ಹೊರನೋಟ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಂದು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ₹600 ಕೋಟಿಯಿಂದ ₹700 ಕೋಟಿ ಬೇಕು. ಪ್ರತಿ ಜಿಲ್ಲೆಯಲ್ಲಿ ಇಂತಹ ಕಾಲೇಜು ಸ್ಥಾಪಿಸಲು ಸಾಕಷ್ಟು ಅನುದಾನದ ಅಗತ್ಯವಿರುವುದರಿಂದ ಖಾಸಗಿ ಸಹಭಾಗಿತ್ವದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಶಿವಾಜಿನಗರದಲ್ಲಿ ಮಂಗಳವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯ ಬಳಿ 13 ಅಂತಸ್ತುಗಳ ಈ ನೂತನ ವೈದ್ಯಕೀಯ ಕಾಲೇಜು ತಲೆ ಎತ್ತಿದೆ.

‘ಗುಜರಾತ್‌ ಮಾದರಿಯಂತೆ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗುವುದು. ಈಗಾಗಲೇ 18 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಮುಂಬರುವ ದಿನಗಳಲ್ಲಿಇನ್ನೂ ಒಂಬತ್ತು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಿದ್ದು, ಶೀಘ್ರ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು' ಎಂದರು.

ADVERTISEMENT

ರಾಜ್ಯಕ್ಕೂ ಬರಲಿದೆ ಏಮ್ಸ್‌: ‘ಕೇಂದ್ರ ಸರ್ಕಾರ ದೇಶದಲ್ಲಿ 22 ಏಮ್ಸ್‌ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ಗಳನ್ನು ನಿರ್ಮಿಸುತ್ತಿದೆ. ಕರ್ನಾಟಕಕ್ಕೂ ಏಮ್ಸ್‌ ಸಂಸ್ಥೆಯನ್ನು ತರುವ ಉದ್ದೇಶ ಇದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಶೀಘ್ರ ಏಮ್ಸ್ ಕೂಡ ರಾಜ್ಯಕ್ಕೆ ಸಿಗಲಿದೆ’ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಲೇಜನ್ನು ಉದ್ಘಾಟಿಸಿದರು.

ಆರೋಗ್ಯ, ವೈದ್ಯಕೀಯ ಶಿಕ್ಷಣ ನೀತಿ ಶೀಘ್ರ
‘ರಾಜ್ಯದಲ್ಲಿ ಶೀಘ್ರದಲ್ಲೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ನೀತಿ ಜಾರಿಗೆ ಬರಲಿದೆ’ ಎಂದು ಡಾ. ಸುಧಾಕರ್ ತಿಳಿಸಿದರು.

‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 2002ರಲ್ಲೇ ಆರೋಗ್ಯ ನೀತಿ ತಂದಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ನೂತನ ಆರೋಗ್ಯ ನೀತಿ ಜಾರಿ ಮಾಡಿದ್ದಾರೆ. ರಾಜ್ಯದಲ್ಲಿ ಇನ್ನೂ ಒಂದು ಹೆಜ್ಜೆೆ ಮುಂದೆ ಹೋಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುವುದು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.