ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಬೆಂಗಳೂರು: 'ಹಠಾತ್ ಸಾವನ್ನು ಇನ್ನು ಮುಂದೆ ಅಧಿಸೂಚಿತ ಕಾಯಿಲೆಯಾಗಿ ಪರಿಗಣಿಸಲಾಗುವುದು' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು. ಪಠ್ಯಪುಸ್ತಕದಲ್ಲಿ ಹೃದಯಾಘಾತದ ಕುರಿತು ಪ್ರತ್ಯೇಕ ಪಠ್ಯ ಅಳವಡಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗುವುದು ಎಂದರು.
'ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ಹೃದಯ ಜ್ಯೋತಿ ಯೋಜನೆ ವಿಸ್ತರಿಸಲಾಗುವುದು' ಎಂದರು.
'ಕೋವಿಡ್ ಪಾಸಿಟಿವ್ ಬಂದವರಲ್ಲಿ ಕೆಲವರಿಗೆ ಹೃದಯಾಘಾತ ಆಗಿದೆ. ಆದರೆ, ಅದು ಕೋವಿಡ್ ಲಸಿಕೆ ಯಿಂದ ಅಲ್ಲ. ಕೋವಿಡ್ ಲಸಿಕೆಯಿಂದ ಜನರಿಗೆ ಅನುಕೂಲ ಆಗಿದೆ. ಕೋವಿಡ್ ಬಂದಾಗ ಸೇವಿಸಿದ ಬೇರೆ ಔಷಧಗಳಿಂದ ಪರಿಣಾಮ ಆಗಿದೆ.
ಬೊಜ್ಜು, ಮಧುಮೇಹ ಮತ್ತಿತರ ಸಮಸ್ಯೆಗಳೂ ಹೃದಯಾಘಾತಕ್ಕೆ ಕಾರಣವಾಗಿದೆ ಎಂದರು.
ಹಠಾತ್ ಹೃದಯಘಾತದ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದರು. ಹೀಗಾಗಿ, ಡಾ. ರವೀಂದ್ರಾಥ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ನೀಡಿದೆ' ಎಂದರು.
ಪುನೀತ್ ರಾಜ್‌ಕುಮಾರ್ ‘ಹೃದಯ ಜ್ಯೋತಿ’ ಯೋಜನೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಣೆ
ವರ್ಷಕ್ಕೊಮ್ಮೆ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೂ ಕನಿಷ್ಠ
ಆರೋಗ್ಯ ತಪಾಸಣೆಗೆ ವ್ಯವಸ್ಥೆ
ಖಾಸಗಿ ಕಂಪನಿ, ಕಾರ್ಖಾನೆ, ಉದ್ದಿಮೆಗಳ ನೌಕರರಿಗೆ ವರ್ಷಕ್ಕೊಮ್ಮೆ
ಯಾದರೂ ಆರೋಗ್ಯ ತಪಾಸಣೆಗೆ ನಿರ್ದೇಶನ
15 ವರ್ಷದ ಶಾಲಾ ಮಕ್ಕಳಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ
ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ಹೃದಯ ಸಂಬಂಧಿ ಪಾಠ ಅಳವಡಿಕೆ
ಕಾನೂನಿನ ಪ್ರಕಾರ ಸರ್ಕಾರಕ್ಕೆ ವರದಿ ಮಾಡಬೇಕಾದ ಕಾಯಿಲೆಯನ್ನು ‘ಅಧಿಸೂಚಿತ ಕಾಯಿಲೆ’ ಎಂದು ಕರೆಯಲಾಗುತ್ತದೆ.
ಹಠಾತ್ ಸಾವನ್ನು ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸಿರುವುದರಿಂದ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಶಂಕಿತ ಮತ್ತು ದೃಢಪಟ್ಟ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ವರದಿ ಮಾಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.