ADVERTISEMENT

ಜೋರು ಮಳೆಗೆ ತಂಪಾದ ನಗರ

ರಸ್ತೆ ಮೇಲೆಯೇ ಹರಿದ ನೀರು l ಹಲವೆಡೆ ಕೆಲ ಹೊತ್ತು ವಿದ್ಯುತ್ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 20:09 IST
Last Updated 20 ಏಪ್ರಿಲ್ 2021, 20:09 IST
ಬೆಂಗಳೂರು- –- ಮೈಸೂರು ರಸ್ತೆಯಲ್ಲಿ ಮಳೆಯಲ್ಲಿಯೇ ದಂಪತಿಯೊಬ್ಬರು ಕೊಡೆ ಹಿಡಿದುಕೊಂಡು ದ್ವಿಚಕ್ರ ವಾಹನದ ಮೇಲೆ ಸಾಗಿದರು   ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.
ಬೆಂಗಳೂರು- –- ಮೈಸೂರು ರಸ್ತೆಯಲ್ಲಿ ಮಳೆಯಲ್ಲಿಯೇ ದಂಪತಿಯೊಬ್ಬರು ಕೊಡೆ ಹಿಡಿದುಕೊಂಡು ದ್ವಿಚಕ್ರ ವಾಹನದ ಮೇಲೆ ಸಾಗಿದರು   ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.   

ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಸಂಜೆ ಗಾಳಿ ಸಹಿತ ಜೋರು ಮಳೆ ಸುರಿಯಿತು.

ಕೆಲ ದಿನಗಳಿಂದ ನಗರದಲ್ಲಿ ಬಿಸಿಲು ಹೆಚ್ಚಿತ್ತು. ಆಗಾಗ ಮೋಡ ಕವಿದ ವಾತಾವರಣವೂ ಕಾಣಿಸಿಕೊಳ್ಳುತ್ತಿತ್ತು. ಮಂಗಳವಾರ ಸಂಜೆ 5ರ ನಂತರ ಜಿಟಿ ಜಿಟಿಯಾಗಿ ಮಳೆ ಆರಂಭವಾಯಿತು. ಗಂಟೆಯವರೆಗೆ ಮಳೆ ಆರ್ಭಟ ಜೋರಾಗಿ, ನಗರವೆಲ್ಲ ತಂಪಾಯಿತು.

ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್,‌ ಬಸವೇಶ್ವರ ನಗರ, ಮಲ್ಲೇಶ್ವರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಗಾಂಧಿನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ವಿಲ್ಸನ್ ಗಾರ್ಡನ್, ಲಾಲ್‌ಬಾಗ್, ಕೋರಮಂಗಲ ಹಾಗೂ ಸುತ್ತಮುತ್ತಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಿತ್ತು.

ADVERTISEMENT

ಮೆಜೆಸ್ಟಿಕ್, ಬಸವೇಶ್ವರನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ರಸ್ತೆ ಮೇಲೆಯೇ ನೀರು ಹರಿಯಿತು. ಹಲವೆಡೆ ಕಾಮಗಾರಿಗಳು ನಡೆಯುತ್ತಿದ್ದು, ಆ ಸ್ಥಳದಲ್ಲಿ ನೀರು ಹರಿಯಿತು. ಇದರಿಂದಾಗಿ ಕಾಮಗಾರಿ ಮಣ್ಣು ರಸ್ತೆ ಮೇಲೆ ಹರಡಿಕೊಂಡಿತ್ತು. ಸಾರ್ವಜನಿಕರ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಯಿತು.

ಕೆಲಸ ಮುಗಿಸಿ ಬಹುತೇಕರು ಸಂಜೆಯೇ ಮನೆಯತ್ತ ಹೊರಟಿದ್ದರು. ಅದೇ ಸಂದರ್ಭದಲ್ಲೇ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಮೆಜೆಸ್ಟಿಕ್, ಯಶವಂತಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕೆಲ ನಿಮಿಷ ವಾಹನಗಳ ದಟ್ಟಣೆ ಕಂಡುಬಂತು.

‘ಕೆಲ ದಿನಗಳಿಂದ ಸಂಜೆ ಸಂದರ್ಭದಲ್ಲಿ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿದ್ದವು. ಆದರೆ, ಮಳೆ ಆಗಿರಲಿಲ್ಲ. ಮಂಗಳವಾರ ಸಂಜೆ ಮಾತ್ರ ನಗರದ‌ ಬಹುತೇಕ ಕಡೆ ಮಳೆ ಆಗಿದೆ. ರಸ್ತೆಯಲ್ಲಿ ನೀರು ನಿಂತಿದ್ದ ದೂರುಗಳು ಬಿಟ್ಟರೆ, ಬೇರೆ ಯಾವ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ನೀರು ನಿಂತ ಕಡೆ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ. ಕೊರೊನಾ ಸೋಂಕಿತರ ಕರೆಗಳ ನಡುವೆಯೂ ಮಳೆ ಸಂಬಂಧಿತವಾಗಿ ಬಂದ ಕರೆಗಳನ್ನು ಸ್ವೀಕರಿಸಿ ಆಯಾ ವಿಭಾಗದ ಅಧಿಕಾರಿಗಳಿಗೆ
ಮಾಹಿತಿ ರವಾನಿಸಲಾಗಿದೆ’ ಎಂದೂ ತಿಳಿಸಿದರು.

ವಿದ್ಯುತ್ ಸಂಪರ್ಕ ಕಡಿತ: ಮಳೆ ಜೊತೆಯಲ್ಲೇ ಗಾಳಿ ಜೋರಾಗಿ ಬೀಸಿತು. ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಬಸವೇಶ್ವರನಗರ, ವಿಜಯನಗರ ಹಾಗೂ ಸುತ್ತಮುತ್ತ ಕೆಲ ಸ್ಥಳಗಳಲ್ಲಿ ಕೆಲ ಹೊತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ನಗರದ ಕೆಲವೆಡೆ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ಸಂಪರ್ಕ ಕಡಿತವಾಗಿತ್ತು. ಬೆಸ್ಕಾಂ ಸಿಬ್ಬಂದಿ, ಮಳೆ ನಿಂತ ನಂತರ ದುರಸ್ತಿ ಕಾರ್ಯ ಕೈಗೊಂಡು ಯಥಾಪ್ರಕಾರ ವಿದ್ಯುತ್ ಸರಬರಾಜು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.