ADVERTISEMENT

ಮಳೆಗೆ ಜನಜೀವನ ಅಸ್ತವ್ಯಸ್ತ

ಬಿಡದಿ: ಜಲಾವೃತ್ತಗೊಂಡ ರಸ್ತೆ, ಕುಸಿದ ಸೇತುವೆ : ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 21:07 IST
Last Updated 27 ಆಗಸ್ಟ್ 2022, 21:07 IST
   

ಬಿಡದಿ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯ ಅಬ್ಬರಕ್ಕೆ ಬಿಡದಿ ಸುತ್ತಮುತ್ತ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತ್ತಗೊಂಡಿದ್ದು, ಸೇತುವೆಗಳು ಕುಸಿದಿವೆ. ಇದರಿಂದ ಬಿಡಿದ ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ವರುಣನ ಆರ್ಭಟದಿಂದ ಹಲವು ಅವಾಂತರ ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತ್ತಗೊಂಡು ಹೊಳೆಯಂತೆ ನೀರು ಹರಿಯುತ್ತಿದೆ. ಇದರ ನಡುವೆಯೂ ವಾಹನಗಳು ಸಂಚರಿಸಿದವು. ಶೇಷಗಿರಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯ ಟೋಲ್ ಜಲಾವೃತ್ತಗೊಂಡ ಪರಿಣಾಮ ವಾಹನ ಸವಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಪರಿಸ್ಥಿತಿ ಅರಿತ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಟೋಲ್‌ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಇದರಿಂದ ವಾಹನ ಸವಾರರು ನಿಟ್ಟಿಸಿರು ಬಿಡುವಂತೆ ಆಯಿತು.

ಬಿಡದಿಯ ಪ್ರಮುಖ ಕರೆಗಳಲ್ಲಿ ಒಂದಾದ ನೆಲ್ಲಿಗುಡ್ಡೆ ಕೆರೆ ಕೋಡಿ ಬಿದ್ದು ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನೀರಿನ ರಭಸಕ್ಕೆ ಬಿಡದಿ ಮತ್ತು ಬಾನಂದೂರು ತಾತ್ಕಾಲಿಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದ ಬಾನಂದೂರು, ಗೊಲ್ಲಹಳ್ಳಿ, ಇಟ್ಟಮಡು, ರಾಮನಹಳ್ಳಿ ನಡುವೆ ಸಂಪರ್ಕ ಕಡಿತಗೊಂಡಿದೆ.

ADVERTISEMENT

ಬಾನಂದೂರಿನಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿ ದೇಗುಲ ಮುಳುಗಡೆಯಾಗಿದ್ದು, ಅರ್ಚಕರ ಮನೆಗೆ ಕೂಡ ನೀರಿನಲ್ಲಿ ಮುಳಗಿದೆ. ಇದೇ ಗ್ರಾಮದ ಬಿಜಿಎಸ್ ಶಾಲೆಗೂ ನೀರು ನುಗ್ಗಿದೆ. ವಾಜರಹಳ್ಳಿ ಮತ್ತು ಕೇತಗಾನಹಳ್ಳಿ ಸಂಪರ್ಕಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಕೆರೆಯ ಪಕ್ಕದಲ್ಲಿ ಇರುವ ಆಂಜನೇಯಸ್ವಾಮಿ ದೇವಾಲಯ ಆವರಣದ ವರೆಗೂ ನೀರು ಹರಿಯುತ್ತಿದೆ. ವಾಜರಹಳ್ಳಿ ಕೆರೆಯ ಕೋಡಿ ಬಿದ್ದು ಇತ್ತೀಚಿಗೆ ನಿರ್ಮಾಣವಾಗಿದ್ದ ತ್ಕಾಲಿಕವಾಗಿ ಮಾಡಿದ್ದ ಸೇತುವೆ ಕುಸಿದಿದೆ. ಶಾಸಕ ಎ.ಮಂಜುನಾಥ್ ಅವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.