ADVERTISEMENT

ಧಾರಾಕಾರ ಮಳೆ: ಬೆಂಗಳೂರಿನಲ್ಲಿ ಇಂದೂ ಆರೆಂಜ್‌ ಅಲರ್ಟ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 19:57 IST
Last Updated 10 ಅಕ್ಟೋಬರ್ 2020, 19:57 IST
ನಗರದ ದಂಡು ರೈಲು ನಿಲ್ದಾಣದ ಬಳಿಯ ರಸ್ತೆಯಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲೇ ವಾಹನಗಳು ಸಂಚರಿಸಿದವು   --–ಪ್ರಜಾವಾಣಿ ಚಿತ್ರ
ನಗರದ ದಂಡು ರೈಲು ನಿಲ್ದಾಣದ ಬಳಿಯ ರಸ್ತೆಯಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲೇ ವಾಹನಗಳು ಸಂಚರಿಸಿದವು   --–ಪ್ರಜಾವಾಣಿ ಚಿತ್ರ   

ಬೆಂಗಳೂರು: ನೈರುತ್ಯ ಮುಂಗಾರು ಚುರುಕುಗೊಂಡಿರುವುದರಿಂದ ನಗರದಲ್ಲಿ ಶನಿವಾರ ಧಾರಾಕಾರ ಮಳೆಯಾಯಿತು. ಭಾನುವಾರವೂ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ 'ಆರೆಂಜ್ ಅಲರ್ಟ್' ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿತ್ತು. ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣ ಇತ್ತು. ಸಂಜೆ 6 ಗಂಟೆಯ ನಂತರ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ.

ಸತತ ಎರಡು ಗಂಟೆ ಕಾಲ ಸುರಿದ ಮಳೆಗೆ ರಾಜಾಜಿನಗರ, ಚಾಮರಾಜಪೇಟೆ, ಶಿವಾಜಿನಗರ, ಮೈಸೂರು ರಸ್ತೆ, ಮೆಜೆಸ್ಟಿಕ್, ಕೆ.ಆರ್.ವೃತ್ತ, ಕೆ.ಆರ್.ಮಾರುಕಟ್ಟೆ, ವಿಜಯನಗರ ಭಾಗದ ರಸ್ತೆಗಳು ಜಲಾವೃತವಾದವು.

ADVERTISEMENT

ಶಿವಾನಂದ ವೃತ್ತ, ಓಕಳಿಪುರ, ಕೊಡಿಗೇಹಳ್ಳಿ ಸೇರಿದಂತೆ ವಿವಿಧ ಕಡೆ ಕೆಳಸೇತುವೆಗಳಲ್ಲಿ ಎರಡು ಮೂರು ಅಡಿಗಳಷ್ಟು ನೀರು ತುಂಬಿತ್ತು. ಈ ಭಾಗಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ, ಸವಾರರು ಸಮಸ್ಯೆ ಎದುರಿಸಿದರು. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸಮಸ್ಯೆಯಾಯಿತು.

ಲಕ್ಕಸಂದ್ರ, ರಾಜಮಹಲ್ ಗುಟ್ಟಹಳ್ಳಿ, ಎಚ್‍ಎಸ್‍ಆರ್ ಬಡಾವಣೆ, ದೊಮ್ಮಲೂರು, ವಿಜ್ಞಾನ ನಗರ, ಬಿಟಿಎಂ ಬಡಾವಣೆ, ಅಗ್ರಹಾರ ದಾಸರಹಳ್ಳಿ, ಕೋಣೇನ ಅಗ್ರಹಾರ, ಬಸವನಗುಡಿ, ಸಂಪಂಗಿರಾಮನಗರ, ಬಿಳೇಕಹಳ್ಳಿ, ಮಾರತ್ತಹಳ್ಳಿ, ಕೋರ
ಮಂಗಲ, ಹೊಯ್ಸಳನಗರ ಸೇರಿದಂತೆ ಹಲವೆಡೆ ಭಾರಿ ಮಳೆ ವರದಿಯಾಗಿದೆ.

ಧರೆಗುರುಳಿದ ಮರ-ಕೊಂಬೆ: ಧಾರಾಕಾರ ಮಳೆಗೆ ಮಲ್ಲೇಶ್ವರದ ಮನೆಯೊಂದರ ಮುಂದೆ ಮರದ ಕೊಂಬೆ ಬಿದ್ದಿದ್ದು, ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು. ರಾಜಭವನ ರಸ್ತೆಯಲ್ಲಿ ಒಂದು ಮರ ಧರೆಗುರುಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.