ADVERTISEMENT

Bengaluru Rains | ಧಾರಾಕಾರ ಮಳೆ: ಹೊಳೆಯಂತಾದ ರಸ್ತೆಗಳು

ಗುಡುಗು ಮಿಂಚಿನ ಆರ್ಭಟ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 16:28 IST
Last Updated 5 ಸೆಪ್ಟೆಂಬರ್ 2023, 16:28 IST
ಹೆಣ್ಣೂರಿನ ಪೂರ್ವಾಂಕರ ಅಪಾರ್ಟ್‌ಮೆಂಟ್ ಬಳಿಯ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು.
ಹೆಣ್ಣೂರಿನ ಪೂರ್ವಾಂಕರ ಅಪಾರ್ಟ್‌ಮೆಂಟ್ ಬಳಿಯ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು.   

ಬೆಂಗಳೂರು: ನಗರದಲ್ಲಿ ಮಂಗಳವಾರ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು.

ಪ್ರಮುಖ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಕೆಳಸೇತುವೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡಿದರು.

ಮಂಗಳವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಯಲ್ಲಿ ಸಾಧಾರಣ ಮಳೆ ಸುರಿಯಿತು. ರಾತ್ರಿ ಮಳೆಯ ಅಬ್ಬರ ಜೋರಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ನಗರದ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು ವಾತಾವರಣ ತಂಪಾಗಿದೆ.

ADVERTISEMENT

ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯ ಯಶಸ್ವಿ ಶಾಲೆಯ ಬಳಿ ಮಳೆಯಿಂದ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು.

ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ವಾಂಕರ ಅಪಾರ್ಟ್‌ಮೆಂಟ್ (ರಾಷ್ಟ್ರೋತ್ಥಾನ) ಬಳಿಯ ರಸ್ತೆ ಜಲಾವೃತಗೊಂಡು ವಾಹನ ಸಂಚಾರ ಬಂದ್ ಆಗಿತ್ತು.

ಗೊಲ್ಲಹಳ್ಳಿ, ವಿದ್ಯಾಪೀಠ, ರಾಜರಾಜೇಶ್ವರಿನಗರ, ಕೆಂಗೇರಿ, ಹೆಮ್ಮಿಗೆಪುರ, ಹಂಪಿನಗರ, ಗಾಳಿ ಆಂಜನೇಯ ದೇವಸ್ಥಾನದ ಸುತ್ತಮುತ್ತ, ನಂದಿನಿಲೇಔಟ್‌, ಕೋಣನಕುಂಟೆ ಭಾಗದಲ್ಲಿ ಮಳೆ ಅಬ್ಬರ ಜೋರಾಗಿತ್ತು.

ನಾಯಂಡನಹಳ್ಳಿ, ದೀಪಾಂಜಲಿನಗರ, ಗಿರಿನಗರ, ಹನುಮಂತನಗರ, ಬಸವನಗುಡಿ, ಬನಶಂಕರಿ, ಜಯನಗರ, ಮಡಿವಾಳ, ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಮಲ್ಲೇಶ್ವರದ ಭಾಗದಲ್ಲೂ ಮಳೆ ಸುರಿಯಿತು.

ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ವಿ.ನಾಗೇನಹಳ್ಳಿ, ಯಲಹಂಕ ಭಾಗದಲ್ಲೂ ಜೋರು ಮಳೆ ಆಯಿತು. ಸಿಡಿಲು ಅಬ್ಬರವೂ ಹೆಚ್ಚಿತ್ತು.

ಬಿಟಿಎಂ ಲೇಔಟ್‌, ಚಾಮರಾಜಪೇಟೆ, ಪುಲಕೇಶಿ ನಗರ, ಹೊರಮಾವು, ಕೋರಮಂಗಲ, ಶೆಟ್ಟಿಹಳ್ಳಿ, ದೊಡ್ಡಬಿದಿರು ಕಲ್ಲು ಭಾಗದಲ್ಲಿ ಮಳೆಯಾಗಿದೆ. ರಸ್ತೆಯಲ್ಲಿ ನೀರು ಹರಿದಿದ್ದರಿಂದ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಹೆಬ್ಬಾಳ ಮೇಲ್ಸೇತುವೆ, ಜಯಮಹಲ್ ರಸ್ತೆ ಮಳೆಯಿಂದ ವಾಹನಗಳ ದಟ್ಟಣೆ ಉಂಟಾಯಿತು.

ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಉಪ್ಪಾರಪೇಟೆ, ಮಲ್ಲೇಶ್ವರ, ಯಶವಂತಪುರ ಮಾರುಕಟ್ಟೆ ವ್ಯಾಪ್ತಿಯಲ್ಲೂ ಮಳೆ ಅಬ್ಬರ ಜೋರಾಗಿತ್ತು. ಇದರಿಂದ ವರ್ತಕರು ಹಾಗೂ ಗ್ರಾಹಕರು ತೊಂದರೆಗೆ ಒಳಗಾದರು.

ಮಳೆ ಮುಂದುವರಿಕೆ ಸಾಧ್ಯತೆ:
ನಗರದಲ್ಲಿ ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರದಲ್ಲಿ ಸುರಿದ ಮಳೆಯಲ್ಲಿ ಜನರು ಕೊಡೆ ಹಿಡಿದು ಸಾಗಿದರು.

ಮಳೆಯ ಪ್ರಮಾಣ (ಮಿ.ಮೀಗಳಲ್ಲಿ) ಎಚ್‌.ಗೊಲ್ಲಹಳ್ಳಿ;52ವಿದ್ಯಾಪೀಠ;45ಕೆಂಗೇರಿ;40ಹೆಮ್ಮಿಗೆಪುರ;38ಹಂಪಿನಗರ;33ಮಾರುತಿ ಮಂದಿರ ವಾರ್ಡ್;31ಗಾಳಿ ಆಂಜನೇಯ ದೇವಸ್ಥಾನದ ಸುತ್ತಮುತ್ತ;30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.