ADVERTISEMENT

ಬೂದಿಗೆರೆ ಕ್ರಾಸ್‌ ಎಂಬ ಸಂಚಾರ ನರಕ

ವಿಜಯಕುಮಾರ್ ಎಸ್.ಕೆ.
Published 26 ಅಕ್ಟೋಬರ್ 2019, 20:35 IST
Last Updated 26 ಅಕ್ಟೋಬರ್ 2019, 20:35 IST
ಬೂದಿಗೆರೆ ಕ್ರಾಸ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗಿರುವುದು ಪ್ರಜಾವಾಣಿ ಚಿತ್ರ/ರಂಜು ಪಿ.
ಬೂದಿಗೆರೆ ಕ್ರಾಸ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗಿರುವುದು ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ರಸ್ತೆ ಉಬ್ಬುಗಳಿಲ್ಲ, ಸಿಗ್ನಲ್‌ಗಳಿಲ್ಲ, ಸಂಚಾರ ದಟ್ಟಣೆ ಉಂಟಾದರೆ ಕೇಳುವವರೂ ಇಲ್ಲ. ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವ ವಾಹನ ದಟ್ಟಣೆಗೆ ಮುಕ್ತಿಯೂ ಇಲ್ಲ...

ಹೊಸಕೋಟೆ ಕಡೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಬೂದಿಗೆರೆ ಕ್ರಾಸ್‌ನಲ್ಲಿ ವಾಹನ ಸವಾರರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.

ವೈಟ್‌ಫೀಲ್ಡ್‌ ಕಡೆಯಿಂದ ದೊಡ್ಡ ಲಾರಿ ಬರುತ್ತಿರುವುದನ್ನು ದೂರದಿಂದ ಕಂಡ ಕೂಡಲೇ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ಲಗುಬಗೆಯಿಂದ ರಸ್ತೆ ದಾಟಿಕೊಳ್ಳಲು ಪ್ರಯತ್ನಿಸುತ್ತಾರೆ. ಏಕೆಂದರೆ, ಬೂದಿಗೆರೆ ಕ್ರಾಸ್‌ಗೆ ದೊಡ್ಡ ಲಾರಿಯೊಂದು ಬಂತೆಂದರೆ ಸಂಚಾರ ದಟ್ಟಣೆ ಉಂಟಾಗುವುದು ಗ್ಯಾರಂಟಿ.

ADVERTISEMENT

ಈ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನೀಗಿಸಲು ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ನಿರ್ಮಿಸಲಾಗಿದೆ. ಆದರೂ ಕಿರಿದಾದ ಸೇತುವೆಯ ಕೆಳಗೆ ಸಂಚಾರ ದಟ್ಟಣೆ ಉಂಟಾಗುವುದು ತಪ್ಪಿಲ್ಲ.

ಹೊಸಕೋಟೆ ಮತ್ತು ವೈಟ್‌ಫೀಲ್ಡ್‌ ಕಡೆಯಿಂದ ಬರುವ ವಾಹನಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಬೂದಿಗೆರೆ ಕ್ರಾಸ್‌ನಲ್ಲಿ ಬಲ ತಿರುವು ಪಡೆದುಕೊಳ್ಳುತ್ತವೆ. ಅಲ್ಲಿಂದ 26 ಕಿ.ಮೀ ಕ್ರಮಿಸಿದರೆ ದೇವನಹಳ್ಳಿ, 39 ಕಿ.ಮೀ ಕ್ರಮಿಸಿದರೆ ವಿಮಾನ ನಿಲ್ದಾಣ ತಲುಪಬಹುದು. ವೈಟ್‌ಫೀಲ್ಡ್‌ನಲ್ಲಿರುವ ಕೈಗಾರಿಕೆಗಳಿಂದ ವಿಮಾನ ನಿಲ್ದಾಣಕ್ಕೆ ಸರಕು ಸಾಗಿಸುವ ಮತ್ತು ಐಟಿ ಉದ್ಯಮಿಗಳು ಪ್ರಯಾಣಿಸುವ ಪ್ರಮುಖ ಮಾರ್ಗ ಇದಾಗಿದೆ. ಹೀಗಾಗಿ, ಸೇತುವೆ ಕೆಳಭಾಗದಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತದೆ.

ಈ ಜಂಕ್ಷನ್‌ನಲ್ಲಿ ಸಂಚಾರ ಸಿಗ್ನಲ್ ವ್ಯವಸ್ಥೆ ಇಲ್ಲದ ಕಾರಣ ಎಲ್ಲಾ ವಾಹನಗಳು ಅಡ್ಡಾದಿಡ್ಡಿಯಾಗಿ ನುಗ್ಗುತ್ತವೆ. ಸರಕು ಸಾಗಣೆಯ ದೊಡ್ಡ ಲಾರಿಗಳು ಬಲ ತಿರುವು ಪಡೆಯುವ ಸಂದರ್ಭದಲ್ಲೇ ಸಾಮಾನ್ಯವಾಗಿ ದಟ್ಟಣೆ ಉಂಟಾಗುತ್ತಿದೆ. ನಿರಂತರವಾಗಿ ಕಾರ್ಯನಿರ್ವಹಿಸಲು ಇಲ್ಲಿಗೆ ಸಂಚಾರ ಪೊಲೀಸರನ್ನೂ ನಿಯೋಜಿಸಿಲ್ಲ. ದಟ್ಟಣೆ ಉಂಟಾದಾಗ ಬರುವ ಪೊಲೀಸರು, ಸಂಚಾರ ಸುಗಮಗೊಳಿಸಲು ಪರದಾಡುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಬೇಕು ಎನ್ನುತ್ತಾರೆ ಅಪಾರ್ಟ್‌ಮೆಂಟ್ ನಿವಾಸಿ ಕಿರಣ್.

‘ಬೂದಿಗೆರೆ ರಸ್ತೆಯಲ್ಲಿ ಟ್ರ್ಯಾಂಕ್ವಿಲಿಟಿ ಅಪಾರ್ಟ್‌ಮೆಂಟ್‌, ಜಿ.ಆರ್. ಸನ್‌ ವಿಲ್ಲಾ ಸೇರಿ ಹಲವು ವಸತಿ ಸಮುಚ್ಚಯಗಳಿವೆ. ಇಲ್ಲಿಂದ ವೈಟ್‌ಫೀಲ್ಡ್‌ ಕಡೆಗೆ ಹೋಗಲು ಬೂದಿಗೆರೆ ಕ್ರಾಸ್ ಜಂಕ್ಷನ್ ದಾಟುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಬೂದಿಗೆರೆ ರಸ್ತೆಯಲ್ಲಿ ಟ್ರಕ್‌ಗಳು ಎಲ್ಲೆಂದರಲ್ಲಿ ನಿಲ್ಲುವುದರಿಂದಲೂ ದಟ್ಟಣೆ ಉಂಟಾಗುತ್ತಿದೆ’ ಎನ್ನುತ್ತಾರೆ ಟ್ರ್ಯಾಂಕ್ವಿಲಿಟಿ ಅಪಾರ್ಟ್‌ಮೆಂಟ್‌ನ ಜಂಟಿ ಕಾರ್ಯದರ್ಶಿ ಮಂಜುನಾಥ ಪಾಟೀಲ.

‘ಸಂಚಾರ ದಟ್ಟಣೆ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಶಾಸಕ ಅರವಿಂದ ಲಿಂಬಾವಳಿ ಗಮನ ಹರಿಸಿಲ್ಲ. ಅವರ ಬಳಿ ಕಣ್ಣೀರಿಟ್ಟರೂ ಪ್ರಯೋಜನ ಆಗಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮಳೆ ಬಂದಾಗಲೆಲ್ಲಾ ಜಂಕ್ಷನ್‌ ಜಾಮ್
ವಿಮಾನ ನಿಲ್ದಾಣ ಕಡೆಯಿಂದ ಬೂದಿಗೆರೆ ಕ್ರಾಸ್ ದಾಟಿಕೊಂಡು ಬರುವ ವಾಹನಗಳು ವೈಟ್‌ಫೀಲ್ಡ್‌ ಕಡೆಗೆ ಸಾಗಲು ಕಾಟಂನಲ್ಲೂರು ಜಂಕ್ಷನ್‌ನ ಕೆಳ ಸೇತುವೆ ನುಗ್ಗಿಯೇ ಹೋಗಬೇಕು. ವೈಟ್‌ಫೀಲ್ಡ್ ಕಡೆಗೆ ದೊಡ್ಡ ಲಾರಿಗಳು ಹೋಗುತ್ತವೆ.

‘ಲಾರಿಗಳು ಅಕ್ಕ–ಪಕ್ಕ ದ್ವಿಚಕ್ರ ವಾಹನಗಳ ಗಮನಿಸದೆ ನುಗ್ಗುವುದರಿಂದ ಅಪಘಾತಗಳೂ ಸಂಭವಿಸಿವೆ. ಸಿಗ್ನಲ್ ಇಲ್ಲದ ಕಾರಣ ಏಕಾಏಕಿ ನುಗ್ಗಿದ ಲಾರಿಯಿಂದ ನಮ್ಮ ಕುಟುಂಬ ಸದಸ್ಯರನ್ನೇ ಕಳೆದುಕೊಂಡಿದ್ದೇವೆ’ ಎಂದು ಪಕ್ಕದಲ್ಲೇ ಇರುವ ಗೋಲ್ಡನ್ ಟ್ರೈಯಾಂಗಲ್ ಅಪಾರ್ಟ್‌ಮೆಂಟ್ ನಿವಾಸಿ ಗೀತಾ ಕಣ್ಣೀರು ಹಾಕಿದರು.

‘ಇನ್ನು ಮಳೆ ಬಂದರೆ ಆಶ್ರಯ ಪಡೆಯಲು ದ್ವಿಚಕ್ರ ವಾಹನ ಸವಾರರು ಈ ಕೆಳ ಸೇತುವೆಯಲ್ಲೇ ನಿಲ್ಲುತ್ತಾರೆ. ಈ ಸಂದರ್ಭದಲ್ಲೂ ದಟ್ಟಣೆ ಉಂಟಾಗುತ್ತದೆ’ ಎನ್ನುತ್ತಾರೆ ಸ್ಥಳೀಯರು.

ಸಿಗ್ನಲ್ ಅಳವಡಿಸಲು ಕ್ರಮ
ಬೂದಿಗೆರೆ ಕ್ರಾಸ್ ಮತ್ತು ಕಾಟಂನಲ್ಲೂರು ಜಂಕ್ಷನ್‌ನಲ್ಲಿ ಸಿಗ್ನಲ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣು ತಿಳಿಸಿದರು.

‘ಎರಡೂ ಜಂಕ್ಷನ್ ದೊಡ್ಡಬನಹಳ್ಳಿ ವ್ಯಾಪ್ತಿಯಲ್ಲಿದೆ. ಆದರೂ ಬೂದಿಗೆರೆ ಕಡೆಯಿಂದ ಹೆಚ್ಚು ವಾಹನಗಳು ಬರುವ ಕಾರಣ ಒಂದು ಭಾಗಕ್ಕೆ ನಮ್ಮ ಪಂಚಾಯಿತಿಯಿಂದಲೇ ಸಿಗ್ನಲ್ ಅಳವಡಿಸುವ ಆಲೋಚನೆ ಇದೆ. ಈ ಸಂಬಂಧ ಸಭೆಯಲ್ಲಿ ವಿಷಯ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

**
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಾಟಂನಲ್ಲೂರು ಜಂಕ್ಷನ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಸಿಗ್ನಲ್ ವ್ಯವಸ್ಥೆ ಮಾಡಿದರೆ ಸಂಚಾರ ದಟ್ಟಣೆ ಸ್ವಲ್ಪಮಟ್ಟಿಗೆ ಸುಧಾರಿಸಬಹುದು.
–ರವಿ, ಆಟೋಚಾಲಕ
*
ದೊಡ್ಡಲಾರಿಗಳು ಬಂದರೆ ಟ್ರಾಫಿಕ್ ಜಾಮ್ ಆಯಿತು ಎಂದೇ ಅರ್ಥ. ಕೆಳಸೇತುವೆ ಕಿರಿದಾಗಿರುವ ಕಾರಣ ಸಮಸ್ಯೆ ಉಂಟಾಗಿದೆ. ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ಸಮಸ್ಯೆ.
–ಬಸಪ್ಪ, ಪೆಟ್ಟಿಗೆ ಅಂಗಡಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.