ಬೆಂಗಳೂರು: ನಗರದೊಳಗೆ ಭಾರಿ ವಾಹನಗಳು ‘ಅನಧಿಕೃತ’ವಾಗಿ ಸಂಚಾರ ನಡೆಸುತ್ತಿದ್ದು, ದಟ್ಟಣೆಯ ಜತೆಗೆ ಅಪಘಾತಕ್ಕೂ ಕಾರಣವಾಗುತ್ತಿವೆ.
ಬೆಳಿಗ್ಗೆ, ಸಂಜೆಯ ದಟ್ಟಣೆ ಅವಧಿಯಲ್ಲಿ ಟ್ರಕ್, ಟಿಪ್ಪರ್ ಹಾಗೂ ಲಾರಿಗಳಿಗೆ ನಗರದ ಒಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಿ ಹಲವು ತಿಂಗಳೇ ಆಗಿದೆ. ಆದರೂ, ಭಾರಿ ವಾಹನಗಳು ಯಾವುದೇ ಲಗಾಮು ಇಲ್ಲದೇ ನಗರದೊಳಗೆ ಪ್ರವೇಶಿಸುತ್ತಿವೆ. ಅಡ್ಡಾದಿಡ್ಡಿ ಸಂಚಾರವನ್ನೂ ನಡೆಸುತ್ತಿವೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರ ಜೀವಕ್ಕೂ ಆಪತ್ತು ತರುತ್ತಿವೆ.
ದಟ್ಟಣೆ ಅವಧಿ ಹೆಚ್ಚಿರುವ, ನಿರ್ಬಂಧಿತ ಸಮಯದಲ್ಲಿ ಲಾರಿಗಳ ಅನಧಿಕೃತ ಸಂಚಾರದಿಂದಾಗಿ ಕಳೆದ ಒಂದು ತಿಂಗಳಲ್ಲಿ ಹಲವು ಅಪಘಾತಗಳು ಸಂಭವಿಸಿ, 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಶಾಶ್ವತ ಅಂಗವಿಕಲತೆಗೂ ಒಳಗಾಗಿದ್ದಾರೆ. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿಯಿದೆ.
ಭಾರಿ ವಾಹನಗಳ ಸಂಚಾರ ನಿಷೇಧವು ಆದೇಶದಲ್ಲಿ ಮಾತ್ರವೇ ಇದೆ. ಆದರೆ, ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
2024ರ ಆಗಸ್ಟ್ 2ರಂದು ನಗರ ಸಂಚಾರ ಪೊಲೀಸರು ಹೊರಡಿಸಿದ್ದ ಆದೇಶದಂತೆ, ಬೆಳಿಗ್ಗೆ 7ರಿಂದ 11ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರ ವರೆಗೆ ವಾರದ ಆರು ದಿನ ಭಾರಿ ವಾಹನಗಳು, ನಗರದ ಒಳಭಾಗಕ್ಕೆ ಪ್ರವೇಶಿಸುವುದಕ್ಕೆ ನಿರ್ಬಂಧ ಇರುತ್ತದೆ. ಶನಿವಾರ ಒಂದು ದಿನ ಮಾತ್ರ, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30 ಹಾಗೂ ಸಂಜೆ 4.30ರಿಂದ ರಾತ್ರಿ 9ರ ವರೆಗೆ ಭಾರಿ ವಾಹನಗಳು ನಗರದ ಒಳಗೆ ಪ್ರವೇಶಿಸುವಂತಿಲ್ಲ. ಆದರೆ, ಈ ಸಮಯದಲ್ಲೇ ಮಲ್ಟಿ ಆ್ಯಕ್ಸೆಲ್, ಟಿಪ್ಪರ್, ಲಾರಿ, ಟ್ರಕ್ ಹಾಗೂ ಸರಕು ಸಾಗಣೆಯ ವಾಹನಗಳು ಲಗಾಮು ಇಲ್ಲದೇ ಸಂಚಾರ ನಡೆಸುತ್ತಿವೆ ಎಂದು ಕಾರು ಹಾಗೂ ದ್ವಿಚಕ್ರ ವಾಹನ ಸವಾರರು ಆರೋಪಿಸಿದ್ದಾರೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ದಾವಣಗೆರೆ, ತುಮಕೂರು, ಹುಬ್ಬಳ್ಳಿ ಕಡೆಯಿಂದ ಬರುವ ಭಾರಿ ವಾಹನಗಳು, ರಾಷ್ಟ್ರೀಯ ಹೆದ್ದಾರಿಗಳ ಮೂಲಕ ದಿನದ ಯಾವುದೇ ಸಮಯದಲ್ಲೂ ಪೀಣ್ಯ ಕೈಗಾರಿಕಾ ಪ್ರದೇಶ, ಮೇಲ್ಸೆತುವೆ ಹಾಗೂ ಯಶವಂತಪುರ ಎಪಿಎಂಸಿ ಆವರಣವನ್ನು ಪ್ರವೇಶಿಸುತ್ತಿವೆ. ಅಷ್ಟೇ ಸುಲಲಿತವಾಗಿ ನಗರದಿಂದ ಹೊರಗೂ ಚಲಿಸುತ್ತಿವೆ. ಟ್ರಕ್ ಹಾಗೂ ಲಾರಿ ಚಾಲಕರಿಗೆ ಯಾವುದೇ ನಿರ್ಬಂಧ ಅನ್ವಯ ಆಗುತ್ತಿಲ್ಲ. ವೈಟ್‌ಟಾಪಿಂಗ್ ಕಾಮಗಾರಿಗೆ ಅಗತ್ಯವಿರುವ ವಸ್ತುಗಳನ್ನೂ ನಿರ್ಬಂಧಿತ ಅವಧಿಯಲ್ಲೇ ಸಾಗಣೆ ಮಾಡುತ್ತಿರುವುದು ದಟ್ಟಣೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ರಸ್ತೆ ಬದಿಯಲ್ಲೇ ನಿಲುಗಡೆ: ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಣೆಗೆ ಹಲವು ಸುಧಾರಣೆ ಕ್ರಮ ಕೈಗೊಂಡಿದ್ದರೂ ಆ ನಿಯಮಗಳು ಈಗ ಪಾಲನೆಯಾಗುತ್ತಿಲ್ಲ. ಪಾರ್ಲೆಜಿ ಫ್ಯಾಕ್ಟರಿ ಬಳಿಯ ಹೆದ್ದಾರಿ ಬಳಿಯೇ ಕಂಟೈನರ್‌ಗಳು ಎಲ್ಲೆಂದರಲ್ಲಿ ನಿಂತು ಸಮಸ್ಯೆ ಸೃಷ್ಟಿಸುತ್ತಿವೆ. ಹೆದ್ದಾರಿ ಪಕ್ಕದ ತಡೆಗೋಡೆಯ ಬಳಿಯೇ ಕೆಲವು ಕಂಟೈನರ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಲಾಗುತ್ತಿದೆ.
‘ನೈಸ್ ರಸ್ತೆಯ ಅಕ್ಕಪಕ್ಕದಲ್ಲಿ ಸ್ಥಳ ನೀಡಿದರೆ ಅಲ್ಲಿ ಕಂಟೈನರ್ ನಿಲುಗಡೆ ಮಾಡುತ್ತೇವೆ. ಜಾಗವಿಲ್ಲದ ಕಾರಣಕ್ಕೆ ಹೆದ್ದಾರಿ ಪಕ್ಕದಲ್ಲಿ ಭಾರಿ ವಾಹನಗಳನ್ನು ನಿಲುಗಡೆ ಮಾಡಬೇಕಾದ ಸ್ಥಿತಿಯಿದೆ’ ಎಂದು ಚಾಲಕರು ಹೇಳಿದ್ದಾರೆ.
‘ನಗರದ ಒಳಗೆ ಸಂಚರಿಸುವಾಗ ಭಾರಿ ವಾಹನಗಳ ಚಾಲಕರು ವೇಗದ ಮಿತಿ ಪಾಲನೆ ಮಾಡುತ್ತಿಲ್ಲ. ಲಾರಿಗಳ ಅಕ್ಕಪಕ್ಕದಲ್ಲಿ ಸಾಗುವ ದ್ವಿಚಕ್ರ ವಾಹಗಳು ಭಾರಿ ವಾಹನಗಳಿಗೆ ಲೆಕ್ಕಕ್ಕೇ ಇಲ್ಲದಂತಾಗಿದೆ. ಬೈಕ್ ಸವಾರರಿಗೆ ಡಿಕ್ಕಿ ಹೊಡೆಸಿ ಅವರ ಮೈಮೇಲೆಯೇ ಹತ್ತಿಸುತ್ತಿದ್ದಾರೆ. ಇಂತಹ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಆದರೂ, ನಿರ್ಬಂಧಿತ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಕಡಿವಾಣ ಬಿದ್ದಿಲ್ಲ’ ಎಂದು ಲಾರಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಸಂಬಂಧಿ ನರೇಂದ್ರ ಹೇಳಿದರು.
ಮೂರು ಟನ್‌ಗಿಂತ ಹೆಚ್ಚಿನ ಭಾರ ಹೊರುವ ವಾಹನಗಳು ನಿಗದಿತ ಅವಧಿಯಲ್ಲಿ ನಗರವನ್ನು ಪ್ರವೇಶಿಸುವಂತಿಲ್ಲ. ನೀರು ಕಸ ಪೊಲೀಸ್ ಸೇನೆ ಹಾಗೂ ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ವಾಹನಗಳಿಗೆ ವಿನಾಯಿತಿ ಇದೆ. ನಿರ್ಬಂಧಿತ ಅವಧಿಯಲ್ಲಿ ನಗರದ ಒಳಗೆ ಬಂದರೆ ಚಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ಗಳಿಗ ಸೂಚನೆ ನೀಡಲಾಗಿದೆ ಎಂದು ಡಿಸಿಪಿಯೊಬ್ಬರು ತಿಳಿಸಿದ್ದಾರೆ.
‘ತುಮಕೂರು ರಸ್ತೆ ಮೈಸೂರು ರಸ್ತೆ ಬಳ್ಳಾರಿ ರಸ್ತೆ ಹೊಸೂರು ರಸ್ತೆ ಮಾಗಡಿ ರಸ್ತೆ ಸರ್ಜಾಪುರ ರಸ್ತೆಯ ಮೂಲಕ ಭಾರಿ ವಾಹನಗಳು ನಗರದ ಒಳಗೆ ಪ್ರವೇಶಿಸುತ್ತಿವೆ. ಜಂಕ್ಷನ್‌ನಲ್ಲಿ ಕೆಲವೇ ಸಿಬ್ಬಂದಿ ಕರ್ತವ್ಯದಲ್ಲಿ ಇರುತ್ತಾರೆ. ಅವರೂ ಸಹ ಭಾರಿ ವಾಹನಗಳಿಗೆ ಜಂಕ್ಷನ್‌ನಲ್ಲೇ ತಡೆಯೊಡ್ಡುವುದಿಲ್ಲ. ಹಣ ಪಡೆದು ಒಳಗೆ ಬಿಡುತ್ತಿದ್ದಾರೆ’ ಎಂದು ದ್ವಿಚಕ್ರ ವಾಹನ ಸವಾರರು ಆರೋಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.