ADVERTISEMENT

ಅಪಹರಣ: ಹಣ ಕೊಡದಿದ್ದಕ್ಕೆ ಹತ್ಯೆ

ಇಬ್ಬರ ಬಂಧನ l ಪ್ರಮುಖ ಆರೋಪಿಗಾಗಿ ಪೊಲೀಸರ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 21:55 IST
Last Updated 6 ಜೂನ್ 2021, 21:55 IST
ಸಾವು–ಸಾಂದರ್ಭಿಕ ಚಿತ್ರ
ಸಾವು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಹತ್ತು ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಛತ್ತೀಸಗಡದ ರಾಯಪುರದಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಎನ್ನಲಾದ ಬಿಹಾರದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.

‘ಹೆಬ್ಬಗೋಡಿ ಬಳಿಯ ಶಿಕಾರಿಪಾಳ್ಯ ನಿವಾಸಿ ಮಹಮ್ಮದ್ ಅಬ್ಬಾಸ್ ಅವರ 5ನೇ ಪುತ್ರ ಆಸೀಫ್ ಆಲಂ ಎಂಬಾತನನ್ನು ಜೂನ್ 3ರಂದು ಅಪಹರಿಸಲಾಗಿತ್ತು. ಬಾಲಕನ ಬಿಡುಗಡೆಗಾಗಿ ₹ 25 ಲಕ್ಷಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಬ್ಬಾಸ್ ಠಾಣೆಗೆ ದೂರು ನೀಡಿದ್ದರು. ಇದು ಗೊತ್ತಾಗುತ್ತಿದ್ದಂತೆ ಆರೋಪಿಗಳು ಬಾಲಕನನ್ನು ಹತ್ಯೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣದ ತನಿಖೆ ಕೈಗೊಂಡಿದ್ದ ವಿಶೇಷ ತಂಡ ರಾಯಪುರಕ್ಕೆ ಹೋಗಿ, ಅಲ್ಲಿಯ ನಿವಾಸಿಗಳಾದ ಮೊಹಮ್ಮದ್ ನೌಶಾದ್ ಹಾಗೂ ಸಿರಾಜ್‌ ಎಂಬಾತನನ್ನು ಬಂಧಿಸಿದೆ. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಗಳನ್ನು ನಗರಕ್ಕೆ ಕರೆತರುತ್ತಿದೆ’ ಎಂದೂ ತಿಳಿಸಿವೆ.

ADVERTISEMENT

ಮದುವೆಗೆ ಹಣ ಹೊಂದಿಸಲು ಕೃತ್ಯ: ‘ಪ್ರಕರಣದ ಪ್ರಮುಖ ಆರೋಪಿ, ಬಿಹಾರದವ. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಹೆಬ್ಬಗೋಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಮದುವೆಗೆ ಹಣ ಹೊಂದಿಸಲು ಸಂಬಂಧಿಕರ ಜೊತೆ ಸೇರಿ ಕೃತ್ಯ ಎಸಗಿದ್ದ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಾಲಕನ ತಂದೆ ಮೊಹಮ್ಮದ್ ಅಬ್ಬಾಸ್, ಕಟ್ಟಡ ನಿರ್ಮಾಣ ಕೆಲಸದ ಮೇಲ್ವಿಚಾರಕರು. ಸ್ವಂತ ಮನೆ ಕಟ್ಟಿಕೊಂಡು ಮಕ್ಕಳ ಜೊತೆ ವಾಸವಿದ್ದರು. ಅವರ ಮನೆ ಬಳಿಯೇ ಪ್ರಮುಖ ಆರೋಪಿ ನೆಲೆಸಿದ್ದ. ಬಾಲಕನನ್ನು ನಿತ್ಯವೂ ನೋಡುತ್ತಿದ್ದ ಆರೋಪಿ, ಆತನನ್ನು ಅಪಹರಿಸಿ ತಂದೆಯನ್ನು ಬೆದರಿಸಿ ಹಣ ಪಡೆಯಲು ಸಂಚು ರೂಪಿಸಿದ್ದ’ ಎಂದೂ ಮೂಲಗಳು ತಿಳಿಸಿವೆ.

ಹೆಬ್ಬಗೋಡಿಯಲ್ಲಿ ಅಪಹರಿಸಿ, ಜಿಗಣಿಯಲ್ಲಿ ಕೊಲೆ: ‘ಪ್ರಮುಖ ಆರೋಪಿ, ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಬಾಲಕನನ್ನು ಅಪಹರಿಸಿದ್ದ. ರಾಯಪುರದಲ್ಲಿದ್ದ ಸಂಬಂಧಿಕರಾದ ಮೊಹಮ್ಮದ್ ನೌಶಾದ್ ಹಾಗೂ ಮೊಹಮ್ಮದ್ ಸಿರಾಜ್‌ಗೆ ಕರೆ ಮಾಡಿ, ‘ಬಾಲಕನ ತಂದೆಗೆ ಕರೆ ಮಾಡಿ ಹಣ ಕೇಳಿ. ಹಣ ಕೊಟ್ಟ ನಂತರ ನಾನು ಬಾಲಕನನ್ನು ಬಿಡುತ್ತೇನೆ’ ಎಂದಿದ್ದ. ಅದರಂತೆ ಅವರಿಬ್ಬರು, ರಾಯಪುರದಿಂದಲೇ ಬಾಲಕನ ತಂದೆಗೆ ಕರೆ ಮಾಡಿ ₹ 25 ಲಕ್ಷ ಕೇಳಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕರೆ ಬರುತ್ತಿದ್ದಂತೆ ಠಾಣೆಗೆ ಬಂದಿದ್ದ ಬಾಲಕನ ತಂದೆ, ಆರೋಪಿಗಳ ಮೊಬೈಲ್ ನಂಬರ್ ಸಹಿತ ದೂರು ನೀಡಿ
ದ್ದರು. ಮೊಬೈಲ್ ನೆಟ್‌ವರ್ಕ್‌ ಪರಿಶೀಲಿಸಿದಾಗ ರಾಯಪುರದಿಂದ ಕರೆ ಬಂದಿರುವುದು ಗೊತ್ತಾಗಿತ್ತು. ಅದೇ ಆಧಾರದಲ್ಲಿ ರಾಯಪುರಕ್ಕೆ ಹೋದ ತಂಡ ಆರೋಪಿಗಳನ್ನು ಬಂಧಿಸಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ದೂರು ನೀಡಿದ ಸಂಗತಿ ತಿಳಿಯುತ್ತಿದ್ದಂತೆ ಪ್ರಮಖ ಆರೋಪಿ, ಬಾಲಕನನ್ನು ಜಿಗಣಿ ಠಾಣೆ ವ್ಯಾಪ್ತಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಆತನ ಜೊತೆ ಮತ್ತಷ್ಟು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ’ ಎಂದೂ ಮೂಲಗಳು ಹೇಳಿವೆ.

ಮೀನು ಮಳಿಗೆ ಷಟರ್ ಮೀಟಿ ಕಳವು

ಬೆಂಗಳೂರು: ಕೋಣನಕುಂಟೆ ಠಾಣೆ ವ್ಯಾಪ್ತಿಯ ಮೀನು ಮಾರಾಟ ಮಳಿಗೆಯೊಂದರ ಷಟರ್ ಮೀಟಿ ಒಳ ನುಗ್ಗಿದ್ದ ಕಳ್ಳರು, ಹಣದ ಬಾಕ್ಸ್ ಕದ್ದೊಯ್ದಿದ್ದಾರೆ.

‘ಜೆ‌.ಪಿ‌. ನಗರದ 8ನೇ ಹಂತದಲ್ಲಿರುವ ‘ಮಲ್ಪೆ ಫಿಶರೀಸ್’ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಆರೋಪಿಗಳ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಳಿಗೆ ಮಾಲೀಕ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಗರದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಬೆಳಿಗ್ಗೆ ಮಾತ್ರ ಮಳಿಗೆ ತೆರೆಯಲು ಅವಕಾಶವಿದೆ. ವ್ಯಾಪಾರ ಮುಗಿಸಿದ್ದ ಕೆಲಸಗಾರರು, ಮಳಿಗೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಶನಿವಾರ ರಾತ್ರಿ ಮಳಿಗೆ ಷಟರ್ ಮೀಟಿ ಒಳ ನುಗ್ಗಿದ್ದ ಆರೋಪಿಗಳು, ಹಣದ ಬಾಕ್ಸ್ ಸಮೇತ ಕದ್ದುಕೊಂಡು ಪರಾರಿಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಮನೆಗೆ ನುಗ್ಗಿ ವೃದ್ಧೆ ಸರ ಕಿತ್ತೊಯ್ದ

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳನೊಬ್ಬ, ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

‘ಲೇಔಟ್‌ನ 18ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಸರೋಜಿನಿ (86) ಎಂಬುವವರು ವಾಸವಿದ್ದಾರೆ. ಅವರು ಒಬ್ಬಂಟಿಯಾಗಿದ್ದ ವೇಳೆ ಹಗಲಿನಲ್ಲೇ ಕಳ್ಳ ಮನೆಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಂಕಿ ಟೋಪಿ ಹಾಕಿಕೊಂಡಿದ್ದ ಕಳ್ಳ, ಮನೆಯಲ್ಲಿ ಕುಳಿತಿದ್ದ ವೃದ್ಧೆ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡಿದ್ದ. ನಂತರ ವೃದ್ಧೆಯನ್ನು ತಳ್ಳಿ ಓಡಿ ಹೋಗಿದ್ದಾನೆ.’ ‘ಮನೆ ಹಾಗೂ ವೃದ್ಧೆ ಒಂಟಿಯಾಗಿರುವುದನ್ನು ತಿಳಿದುಕೊಂಡಿದ್ದವರೇ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಕಳ್ಳನಿಗಾಗಿ ಶೋಧ ಮುಂದುವರಿದಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.