ADVERTISEMENT

ಬೆಂಗಳೂರು | ಮರಕ್ಕೆ ಕಾರು ಡಿಕ್ಕಿ ಹೊಡೆಸಿ ಸ್ನೇಹಿತನ ಕೊಲೆ: ಟೆಕಿಯ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:51 IST
Last Updated 26 ಜನವರಿ 2026, 15:51 IST
ಎಂ.ಪ್ರಶಾಂತ್‌ 
ಎಂ.ಪ್ರಶಾಂತ್‌    

ಬೆಂಗಳೂರು: ಹೆಬ್ಬಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಮ್ಮಸಂದ್ರದ ಆಟದ ಮೈದಾನದ ಬಳಿ, ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿ ಸ್ನೇಹಿತನನ್ನು ಕೊಲೆ ಮಾಡಲಾಗಿದೆ.

ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಹೋಬಳಿಯ ಎಲೆಕ್ಟ್ರಾನಿಕ್‌ ಸಿಟಿಯ ವೀರಸಂದ್ರದ ನಿವಾಸಿ ಪ್ರಶಾಂತ್‌ (33) ಕೊಲೆಯಾದವರು.

ಪ್ರಶಾಂತ್ ಅವರ ತಾಯಿ ಎಂ.ಅನು ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿಜ್ಞಾನ ನಗರದ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ರೋಷನ್‌ ಹೆಗ್ಡೆ (36) ಅವರ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಕಾರು ಚಾಲನೆ ಮಾಡುತ್ತಿದ್ದ ರೋಷನ್‌ ಹೆಗ್ಡೆಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದುಕೊಳ್ಳಲಾಯಿತು. ಪ್ರಶಾಂತ್‌ ಅವರ ತಾಯಿ ನೀಡಿದ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಕಲಂ 103 ಅಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

ಅನು ಅವರಿಗೆ ಪ್ರತಾಪ್‌ ಹಾಗೂ ಪ್ರಶಾಂತ್‌ ಇಬ್ಬರು ಮಕ್ಕಳು. ಪ್ರತಾಪ್‌ ಅವರಿಗೆ ಮದುವೆಯಾಗಿದೆ. ಅನು ಅವರು ಎಂ–5 ಮಾಲ್‌ ಬಳಿ ಟೀ ಅಂಗಡಿ ನಡೆಸುತ್ತಿದ್ದಾರೆ. ಟೀ ಅಂಗಡಿಯಲ್ಲಿ ತಾಯಿಗೆ ಪ್ರಶಾಂತ್ ನೆರವು ನೀಡುತ್ತಿದ್ದರು. ಹೆಬ್ಬಗೋಡಿಯ ಕಮ್ಮಸಂದ್ರದಲ್ಲಿ ಜ.24ರಂದು ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಪ್ರಶಾಂತ್‌ ಹಾಗೂ ಸ್ನೇಹಿತರು ಆ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅಂದು ಸಂಜೆ 6 ಗಂಟೆ ವೇಳೆಗೆ ಪಂದ್ಯಾವಳಿ ಮುಗಿದ ಕಾರಣ ಎಲ್ಲರೂ ಮನೆಗೆ ತೆರಳಿದ್ದರು. ಕ್ರಿಕೆಟ್‌ನಲ್ಲಿ ತಂಡ ಸೋತಿರುವುದಕ್ಕೆ ಪ್ರಶಾಂತ್‌ ಬೇಸರಗೊಂಡಿದ್ದರು. ತಾಯಿ ಜತೆಗೆ ಸ್ವಲ್ಪ ಸಮಯ ಮಾತನಾಡಿ ಅಂದು ಮನೆಯಲ್ಲಿ ಉಳಿದಿದ್ದರು ಎಂದು ಪೊಲೀಸರು ಹೇಳಿದರು.

ಜ.25ರಂದು ದಿನವಿಡೀ ಪ್ರಶಾಂತ್‌ ಮನೆಯಲ್ಲಿಯೇ ಇದ್ದರು. ಅಂದು ಸಂಜೆ ಪಾರ್ಟಿಗೆಂದು ಪ್ರಶಾಂತ್ ಅವರನ್ನು ರೋಷನ್ ಕರೆಸಿಕೊಂಡಿದ್ದರು. ರಾತ್ರಿ 7.30ರ ಸುಮಾರಿಗೆ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಾ ಪ್ರಶಾಂತ್‌ ಮನೆಯಿಂದ ಹೊರಕ್ಕೆ ಹೋಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಾರ್ಟಿಗೆ ತೆರಳಿದ್ದ ವೇಳೆ ಗಲಾಟೆ:

ಕೆಲವು ಸ್ನೇಹಿತರು ಕ್ರೀಡಾಂಗಣದ ಒಂದು ಬದಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪ್ರಶಾಂತ್‌ ಸಿಗರೇಟ್‌ ಹಚ್ಚಲು ರೋಷನ್‌ ಬಳಿ ಲೈಟರ್‌ ಕೇಳಿದ್ದರು. ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳವಾಗಿತ್ತು. ಕೋಪದಲ್ಲಿ ಪ್ರಶಾಂತ್‌ಗೆ ರೋಷನ್‌ ಕೈಗಳಿಂದ ಹೊಡೆದಿದ್ದರು. ಸ್ಥಳದಲ್ಲಿದ್ದ ಸ್ನೇಹಿತರು ಜಗಳ ಬಿಡಿಸಿದ್ದರು. ನಂತರ, ರಾತ್ರಿ 8.30ರ ಸುಮಾರಿನಲ್ಲಿ ರೋಷನ್‌ ತನ್ನ ಕಾರು ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದರು. ಆಗ, ಪ್ರಶಾಂತ್‌ ಕಾರಿನ ಬಳಿ ಹೋಗಿ ಡೋರ್‌ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕಾರು ಮುಂದಕ್ಕೆ ಸಾಗಿದರೂ ಪ್ರಶಾಂತ್ ಅವರು ಡೋರ್ ಕೈಬಿಟ್ಟಿರಲಿಲ್ಲ ಎಂದು ಪೊಲೀಸರು ಹೇಳಿದರು.

ರೋಷನ್‌ ಹೆಗ್ಡೆ 

ಫುಟ್‌ರೆಸ್ಟ್‌ ಮೇಲೆ ನಿಲ್ಲಿಸಿಕೊಂಡು ಕೃತ್ಯ:


ನಂತರ ಟಾಟಾ ಸಫಾರಿ ಕಾರಿನ ಫುಟ್‌ರೆಸ್ಟ್‌ ಮೇಲೆ ಪ್ರಶಾಂತ್ ಅವರು ನಿಂತಿದ್ದರು. ಆಗ ಕಾರನ್ನು ಕಮ್ಮಸಂದ್ರದ ಆಟದ ಮೈದಾನದಿಂದ 400 ಮೀಟರ್ ಮುಂದಕ್ಕೆ ತೆಗೆದುಕೊಂಡು ಹೋಗಿ ಮರಕ್ಕೆ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಹೊಡೆಸಿರುವ ದೃಶ್ಯ 

ಡ್ಯಾಶ್ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆ

ಈ ಘಟನೆಯ ದೃಶ್ಯಾವಳಿ ಕಾರಿನ ಡ್ಯಾಶ್‌ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯನ್ನು ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ. ದೊಮ್ಮಲೂರಿನ ಆಟೊ ಡೆಸ್ಕ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ರೋಷನ್‌ ಹೆಗ್ಡೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ರೋಷನ್‌ ಅವರು ವಿಜ್ಞಾನ ನಗರದಲ್ಲಿ ನೆಲಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.