ADVERTISEMENT

ಹೆಬ್ಬಾಳ: ಹೊಸ ಲೂಪ್‌ನಿಂದ ತಗ್ಗಿದ ದಟ್ಟಣೆ

ಡಿ.20ರಿಂದ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 22:30 IST
Last Updated 26 ಡಿಸೆಂಬರ್ 2025, 22:30 IST
ಹೆಬ್ಬಾಳ ಮಾರ್ಗದ ಎರಡನೇ ಲೂಪ್‌ನಲ್ಲಿ ವಾಹನ ಸಂಚಾರದ ದೃಶ್ಯ
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಹೆಬ್ಬಾಳ ಮಾರ್ಗದ ಎರಡನೇ ಲೂಪ್‌ನಲ್ಲಿ ವಾಹನ ಸಂಚಾರದ ದೃಶ್ಯ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್   

ಬೆಂಗಳೂರು: ಹೆಬ್ಬಾಳ ಮಾರ್ಗದಲ್ಲಿ ನಿರ್ಮಿಸಿರುವ ಎರಡನೇ ಲೂಪ್‌ ರ್‍ಯಾಂಪ್‌ನಲ್ಲಿ ಡಿ.20ರಿಂದ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಈ ಮಾರ್ಗದಲ್ಲಿ ಶೇ 25ರಷ್ಟು ದಟ್ಟಣೆ ಸಮಸ್ಯೆ ತಗ್ಗಿದೆ.

ದಟ್ಟಣೆ ಅವಧಿಯಾದ ಬೆಳಿಗ್ಗೆ ಹಾಗೂ ಸಂಜೆ ವಾಹನಗಳು ಸರಾಗವಾಗಿ ಸಂಚರಿಸುತ್ತಿವೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಚಾರ ಪೊಲೀಸರು ಹೇಳಿದ್ದಾರೆ.  

ಕಾಮಗಾರಿಯಿಂದ ಕಳೆದ ಕೆಲವು ತಿಂಗಳಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು.

ADVERTISEMENT

ಬಿಡಿಎ ಎರಡನೇ ಲೂಪ್‌ ಕಾಮಗಾರಿಯ ಕೆಲಸವನ್ನು ಪೂರ್ಣಗೊಳಿಸಿ ಪ್ರಾಯೋಗಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದರಿಂದ ವಾಹನ ದಟ್ಟಣೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಲ್ಸೇತುವೆಯಲ್ಲಿ ಬರುವ ವಾಹನಗಳು ಅಡ್ಡಿ ಇಲ್ಲದೆ, ಮೇಖ್ರಿ ವೃತ್ತದತ್ತ ಸಾಗಬಹುದು.

ಹೆಬ್ಬಾಳ ಮೇಲ್ಸೇತುವೆಯ ಹೊಸ ಲೂಪ್ ರ‍್ಯಾಂಪ್‌ನಿಂದ ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಸಲು ಅನುಕೂಲ ಆಗಿದೆ‌. ಅಲ್ಲದೇ ಎಸ್ಟಿಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ವೃತ್ತ ಪ್ರವೇಶಕ್ಕೂ ತುಂಬಾ ಸಹಕಾರವಾಗಿದೆ ಎಂದು ವಾಹನ ಸವಾರರು ಹೇಳಿದರು. 

‘ಯಲಹಂಕ, ಜಕ್ಕೂರು, ಸಹಕಾರನಗರದಿಂದ ಬರುವವರು ನಗರದ ಪ್ರವೇಶಕ್ಕೂ ಸುಲಭವಾಗಿದೆ. ಈ ಹಿಂದೆ ಮೇಖ್ರಿ ವೃತ್ತ ತಲುಪುವುದಕ್ಕೆ 45 ನಿಮಿಷ ಬೇಕಿತ್ತು. ಈಗ ಐದೇ ನಿಮಿಷದಲ್ಲಿ ತಲುಪುತ್ತಿದ್ದೇವೆ’ ಎಂದು ಸವಾರ ಕೃಷ್ಣಕುಮಾರ್ ಹೇಳಿದರು.

ಆಗಸ್ಟ್‌ನಲ್ಲಿ ಕೆ.ಆರ್ ಪುರದಿಂದ ಮೇಖ್ರಿ ವೃತ್ತದ ಕಡೆಗೆ ಮೊದಲ ಲೂಪ್ ರ‍್ಯಾಂಪ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ, ನೇರವಾಗಿ ಮೇಖ್ರಿ ವೃತ್ತಕ್ಕೆ ವಾಹನಗಳು ಸಂಚರಿಸಲು ಎರಡನೇ ಲೂಪ್‌ ಅವಕಾಶ ಮಾಡಿಕೊಟ್ಟಿದೆ.

ಹೆಬ್ಬಾಳದಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ. ಆದರೆ, ಮುಂದಿನ ಸಿಬಿಐ ವೃತ್ತದ ಜಂಕ್ಷನ್‌ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ. ಹೆಬ್ಬಾಳ ಜಂಕ್ಷನ್‌ನಿಂದ ಸುಗಮವಾಗಿ ವಾಹನಗಳು ಸಾಗುವುದರಿಂದ ಮುಂದಿನ ಸಿಬಿಐ ಜಂಕ್ಷನ್‌ನಲ್ಲಿ ಸಮಸ್ಯೆಯಾಗಿದೆ. ಮೇಖ್ರಿ ವೃತ್ತದಲ್ಲೂ ಎಡ, ಬಲ ತಿರುಗುವ ವಾಹನಗಳು ಹೆಚ್ಚಾಗಿದ್ದು, ದಟ್ಟಣೆ ಉಂಟಾಗುತ್ತಿದೆ.

ಹೆಬ್ಬಾಳ ಮಾರ್ಗದ ಎರಡನೇ ಲೂಪ್‌ನಲ್ಲಿ ವಾಹನ ಸಂಚಾರದ ದೃಶ್ಯ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.