
ಸುರಂಗ ರಸ್ತೆ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ವಾಹನ ದಟ್ಟಣೆಯನ್ನು ನಿರ್ವಹಣೆ ಮಾಡಲು ಮೂರು ಪಥದ ಅವಳಿ ಸುರಂಗ ರಸ್ತೆ, ಅದಕ್ಕೆ ಪೂರಕವಾಗಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಹೆಬ್ಬಾಳ ಮೇಲ್ಸೇತುವೆಯಿಂದ ಪಶುವೈದ್ಯ ಕಾಲೇಜಿನವರೆಗೆ ಸುರಂಗ ರಸ್ತೆಯನ್ನು ‘ಕಟ್ ಆ್ಯಂಡ್ ಕವರ್’ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಅಲ್ಲದೆ, ಇದಕ್ಕೆ ಸಂಪರ್ಕವಾಗುವಂತೆ ಮೇಲ್ಮುಖ–ಕೆಳಮುಖ ರ‍್ಯಾಂಪ್‌ನೊಂದಿಗೆ ಎಲಿವೇಟೆಡ್ ಕಾರಿಡಾರ್ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಂಪನ್ಮೂಲದಿಂದಲೇ ನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ನಿಯಮಿತ (ಬಿ–ಸ್ಮೈಲ್) ವತಿಯಿಂದ ಈ ಸುರಂಗ ರಸ್ತೆಯನ್ನು ನಿರ್ಮಿಸಲು, ರೋಡಿಕ್ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿಯನ್ನೂ (ಡಿಪಿಆರ್) ತಯಾರಿಸಲಾಗಿತ್ತು. ‘ಹೆಬ್ಬಾಳ ಜಂಕ್ಷನ್‌ನಲ್ಲಿ ಸುರಂಗ ರಸ್ತೆಯನ್ನು ಬಿಡಿಎ ಸಂಪನ್ಮೂಲದಿಂದ ನಿರ್ಮಿಸಲು ಸಿದ್ಧವಿದೆ. ಬಿಡಿಎಯಲ್ಲಿ ನುರಿತ ಎಂಜಿನಿಯರ್‌ಗಳು, ಹೆಬ್ಬಾಳದ ಮೇಲ್ಸೇತುವೆ ಕಾಮಗಾರಿಯನ್ನು ನಡೆಸುತ್ತಿದ್ದು, ಸುರಂಗ ರಸ್ತೆಯ ಕಾಮಗಾರಿಯನ್ನೂ ವಹಿಸಿದರೆ ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ’ ಎಂದು ಬಿಡಿಎ ಆಯುಕ್ತರು ಸರ್ಕಾರಕ್ಕೆ ಕೇಳಿಕೊಂಡಿದ್ದರು.
ಬಿ–ಸ್ಮೈಲ್‌ನಿಂದ ಸುರಂಗ ರಸ್ತೆ ನಿರ್ವಹಿಸಿದ್ದರೆ, ಸರ್ಕಾರ ನೀಡುವ ವಾರ್ಷಿಕ ₹4 ಸಾವಿರ ಕೋಟಿ ಅನುದಾನದಲ್ಲೇ ವೆಚ್ಚ ಭರಿಸಬೇಕಿತ್ತು. ಆದರೆ, ಬಿಡಿಎ ಸಂಪೂರ್ಣ ಆರ್ಥಿಕ ವೆಚ್ಚವನ್ನು ತಾನೇ ಭರಿಸುವುದಾಗಿ ಹೇಳಿದ್ದರಿಂದ ಅದಕ್ಕೇ ಸುರಂಗ ರಸ್ತೆ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಬಿ–ಸ್ಮೈಲ್ ಅಂತಿಮಗೊಳಿಸಿರುವ ಡಿಪಿಆರ್‌ನಂತೆಯೇ ಸುರಂಗ ರಸ್ತೆ ನಿರ್ಮಿಸಲು ತಿಳಿಸಲಾಗಿದೆ.
‘ಕರ್ನಾಟಕ ಪಶುವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು) ಆವರಣದ 26 ಸಾವಿರ ಚದರ ಮೀಟರ್ ಜಮೀನನ್ನು ನೀಡಲು ಕೋರಲಾಗಿತ್ತು. ಅದಕ್ಕೆ ವಿಶ್ವವಿದ್ಯಾಲಯ ಒಪ್ಪಿಲ್ಲ. ಆದರೆ, ಅದರ ಆವರಣದ ಕೆಳಭಾಗದಲ್ಲಿ ಸುರಂಗ ರಸ್ತೆ ಸಾಗಲು ಸಮ್ಮತಿ ನೀಡಿದೆ. ಹೀಗಾಗಿ, ಸುರಂಗ ರಸ್ತೆಗಾಗಿ ಅಲ್ಲಿನ ಜಾಗವನ್ನು ಬಳಸಿಕೊಂಡು ನಂತರ ಅದನ್ನು ಈಗಿರುವಂತೆಯೇ ಬಿಟ್ಟುಕೊಡಲಾಗುತ್ತದೆ’ ಎಂದು ಬಿಡಿಎ ಆಯುಕ್ತರು ಸುರಂಗ ರಸ್ತೆ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.
ಬಿಡಿಎ ಆರ್ಥಿಕವಾಗಿ ಸಬಲವಾಗಿದ್ದು, ವಸತಿ– ಮೂಲೆ ನಿವೇಶನಗಳ ಹರಾಜಿನಿಂದ ₹4,500 ಕೋಟಿ, ಶಿವರಾಮಕಾರಂತ ಬಡಾವಣೆಯ ಅರ್ಜಿ ಠೇವಣಿಯಿಂದ ₹1,500 ಕೋಟಿ, ಫ್ಲ್ಯಾಟ್, ವಿಲ್ಲಾ, ಸಿಎ ನಿವೇಶನ ಹರಾಜಿನಿಂದ ₹1,000 ಕೋಟಿ ಹಾಗೂ ಅನಧಿಕೃತ ನಿರ್ಮಾಣಗಳಿಗೆ 38(ಡಿ) ಅನುಷ್ಠಾನದಿಂದ ₹3,000 ಕೋಟಿ ಸೇರಿದಂತೆ 2026ರ ಮಾರ್ಚ್ ಅಂತ್ಯಕ್ಕೆ ₹10 ಸಾವಿರ ಕೋಟಿ ಸಂಗ್ರಹಿಸಲಿದೆ ಎಂದು ಆಯುಕ್ತರು ವಿವರಿಸಿದ್ದಾರೆ.
2025–25ರ 4ನೇ ತ್ರೈಮಾಸಿಕದಿಂದ 2027–28ನ ಮೂರನೇ ತ್ರೈಮಾಸಿಕದವರೆಗೆ ಕಂತಿನಲ್ಲಿ ಸುರಂಗ ರಸ್ತೆಗೆ ₹2,215 ಕೋಟಿ ಭರಿಸಲು ಸಿದ್ಧವಿದೆ ಎಂದು ಆರ್ಥಿಕ ವೆಚ್ಚವನ್ನೂ ವಿವರವಾಗಿ ನೀಡಿದ್ದಾರೆ. ಇದರಲ್ಲಿ, ₹333 ಕೋಟಿ ಶಾಸನಬದ್ಧ ಶುಲ್ಕ, ₹190 ಕೋಟಿ ಜಿಎಸ್‌ಟಿ, ಸರ್ಕಾರಿ ಜಮೀನಿನಲ್ಲಿ ಸುರಂಗ ರಸ್ತೆ ಸಾಗುವುದರಿಂದ ಭೂಸ್ವಾಧೀನಕ್ಕೆ ₹25 ಕೋಟಿ ಹಾಗೂ ಯುಟಿಲಿಟಿ ಸೌಲಭ್ಯವನ್ನು ಬದಲಾಯಿಸಲು ₹35 ಕೋಟಿ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.