ಬೆಂಗಳೂರು: ‘2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿಯೂ ಮತ ಕಳವು ನಡೆದಿತ್ತು’ ಎಂದು ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆರೋಪಿಸಿದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮತ ಕಳವು ಮಾಡುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಈ ಗಂಭೀರ ಆರೋಪ ಮಾಡಿದರು.
‘ಹೆಬ್ಬಾಳ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಮತಗಳ ಕಳವು ಆಗಿದೆ. ಆದರೂ ಕ್ಷೇತ್ರದ ಮತದಾರರು ನನ್ನ ಕೈಬಿಡಲಿಲ್ಲ. 32 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ತಂದುಕೊಟ್ಟರು’ ಎಂದರು.
‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಒಂದು ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಆ ಒಂದು ಮತವನ್ನೇ ಕಸಿದುಕೊಳ್ಳುವಂಥ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆ ಮೂಲಕ, ಪ್ರಜಾಪ್ರಭುತ್ವದ ಹತ್ಯೆ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹೆಬ್ಬಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸ ಇಲ್ಲದಿದ್ದರೂ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಜನ ಪ್ರತ್ಯಕ್ಷರಾಗುತ್ತಾರೆ. ಬೆಂಗಳೂರು ಹೊರವಲಯದ ಪಟ್ಟಣಗಳಿಂದ ಇಲ್ಲಿಗೆ ಬಂದು ಮತ ಚಲಾಯಿಸಿ ಹೋಗುತ್ತಾರೆ. ಮತ್ತೆ ಅವರು ಬರುವುದು ಮುಂದಿನ ಚುನಾವಣೆ ವೇಳೆಗೆ’ ಎಂದು ಹೇಳಿದ ಅವರು, ‘ಗಂಗೇನಹಳ್ಳಿ ವಾರ್ಡ್‌ನ ವಿಳಾಸ ಹೊಂದಿದ ಸಾವಿರಕ್ಕೂ ಹೆಚ್ಚು ಜನರು ಬಂದು ಮತ ಹಾಕುತ್ತಾರೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
ಪಾಲಿಕೆ ಚುನಾವಣೆಯಲ್ಲಿ ಎಚ್ಚರ ವಹಿಸಿ: ‘ಮತ ಕಳವು ಪ್ರಕರಣಗಳನ್ನು ಪತ್ತೆ ಮಾಡಿ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ನಗರಪಾಲಿಕೆಗಳಿಗೆ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಅತ್ಯಂತ ಎಚ್ಚರದಿಂದ ಮತದಾರರ ಪಟ್ಟಿ ಪರಿಶೀಲಿಸಿ, ಮತ ಕಳವು ತಡೆಗಟ್ಟಬೇಕು’ ಎಂದರು.
ಸಹಿ ಸಂಗ್ರಹ ಅಭಿಯಾನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.