
ಬೆಂಗಳೂರು: ನಾಲ್ಕು ದಶಕಗಳಿಂದ ಶಿಕ್ಷಣ ತಜ್ಞ ಎಂ.ಕೆ.ಶ್ರೀಧರ್ ಅವರ ಸಹಾಯಕ, ಒಡನಾಡಿಯಾಗಿರುವ ನರಸಿಂಹ ಅವರ ಬದುಕಿನ ಮಾನವೀಯ ಪಯಣವನ್ನು ತೆರೆದಿಡುವ ‘ಹೆಗಲು’ ಪುಸ್ತಕ ಭಾನುವಾರ ನಗರದಲ್ಲಿ ಜನಾರ್ಪಣೆಗೊಂಡಿತು.
ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ‘ಭಾವಸ್ಪರ್ಶಿಯಾಗಿ ರೂಪುಗೊಂಡಿರುವ ಕೃತಿಯಿದು. ಸೇವೆಯಲ್ಲಿ ತೊಡಗಿಕೊಂಡವರ ಸಾತ್ವಿಕ ಸ್ವಭಾವವನ್ನು ಒಳಗಣ್ಣಿನ ರೀತಿ ತೆರೆದಿಡುವ ಕಥನ ಓದುತ್ತಾ ಹೋದರೆ ಕಣ್ಣಾಲಿಗಳು ತೇವಗೊಳ್ಳುತ್ತವೆ’ ಎಂದು ಹೇಳಿದರು.
ನಾಯಕರು, ಅಧಿಕಾರದಲ್ಲಿರುವವರ ಕಣ್ಣು ತೆರೆಸುವ ಕಾಯಕವನ್ನು ನರಸಿಂಹ ಮಾಡಿಕೊಂಡು ಬಂದಿದ್ದಾರೆ. ಮಾನವೀಯ ಅಂತಃಕರಣ ಇನ್ನೂ ಬದುಕಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ದೊಡ್ಡ ಕಟ್ಟಡಗಳು, ರಸ್ತೆಗಳಿಗಿಂತ ಪರಸ್ಪರ ಅನುಕಂಪ, ಅಂತಃಕರಣವನ್ನು ಜನರಲ್ಲಿ ಪುನರುತ್ಥಾನಗೊಳಿಸುವ ಅಗತ್ಯವಿದೆ ಎಂದು ನುಡಿದರು.
ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡಿ, ‘ನರಸಿಂಹ ಅವರು ಶ್ರೀಧರ್ ಬದುಕಿನ ಭಾಗವೇ ಆಗಿದ್ದಾರೆ. ಹೆಗಲಿಗೆ ಹೆಗಲು ಕೊಟ್ಟು ನಾಲ್ಕು ದಶಕದಿಂದ ಇರುವ ಸನ್ನಿವೇಶ ನೋಡಿದರೆ ಮಾನವೀಯತೆ ಎನ್ನುವುದು ಹೇಗೆ ಜೀವಂತವಾಗಿದೆ ಎನ್ನುವುದನ್ನು ಸಾರುತ್ತದೆ. ಇಂತಹ ಮೌಲ್ಯಗಳೇ ಮನುಷ್ಯನನ್ನು ಜೀವನ್ಮುಖಿಯಾಗಿಸುತ್ತವೆ. ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸೇವೆಯ ಹಾದಿಯನ್ನು ಅಕ್ಷರದ ಮೂಲಕ ಇಲ್ಲಿ ಮನೋಜ್ಞವಾಗಿಯೇ ಕಟ್ಟಿ ಕೊಡಲಾಗಿದೆ’ ಎಂದು ಹೇಳಿದರು.
ನಗರದಲ್ಲಿ ಮಿತ್ರ ಜ್ಯೋತಿ ಸಂಸ್ಥೆ ನಡೆಸುತ್ತಿರುವ ಮಧು ಸಿಂಘಾಲ್, ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಅಜೀಂ ಪ್ರೇಮ್‌ಜೀ ಫೌಂಡೇಷನ್‌ನ ಸಿಇಒ ಅನುಗಾರ್ ಬೆಹರ್, ಪ್ರೊ.ವಿಷ್ಣುಕಾಂತ ಚಟಪಲ್ಲಿ, ಲೇಖಕಿ ಭಾರತಿ ಹೆಗಡೆ ಮಾತನಾಡಿದರು.
ಐವರಿಗೆ ವಿಶೇಷ ಗೌರವ
ಕಾರ್ಯಕ್ರಮದಲ್ಲಿ ಐವರನ್ನು ಗೌರವವಿಸಿದ್ದು ವಿಶೇಷವಾಗಿತ್ತು. ದೃಷ್ಟಿ ದೋಷವುಳ್ಳವರ ಕುರಿತು ಪರಿಣತಿ ಪಡೆದು ಮಿತ್ರ ಜ್ಯೋತಿ ಸಂಸ್ಥೆಯಲ್ಲಿ ಸೇವಾ ನಿರತರಾಗಿರುವ ಶಾರದಾ ಶ್ರವಣದೋಷವಿದ್ದರೂ ಉನ್ನತ ಶಿಕ್ಷಣ ಪಡೆದು ತಮ್ಮದೇ ಸಂಸ್ಥೆ ಆರಂಭಿಸಿರುವ ಅಮೋಘ ಶಾಸ್ತ್ರಿ ಮಸ್ಕುಲರ್ ಥೆರೆಪಿಸ್ಟ್ ಡಾ. ಸಮರ್ಥ್ ಅಂಗವಿಕಲರಾದರೂ ವೀಲ್‌ಚೇರ್‌ಗಳನ್ನು ರೂಪಿಸುವ ಸಲಹೆಗಾರರಾದ ಪಿ.ಸುಭಾಷ್ ಎಂ.ಕೆ.ಶ್ರೀಧರ್ ಅವರ ಸಹಾಯಕ ನಾಗೇಂದ್ರ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.