
ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ವಾರ್ಡ್‌ಗಳ ಹೆಸರು ಬದಲಾವಣೆಗೆ ಅನುಸರಿಸಿರುವ ಮಾನದಂಡ ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಒದಗಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಜಿಬಿಎ ವ್ಯಾಪ್ತಿಯ ‘ಹೆಮ್ಮಿಗೆಪುರ ವಾರ್ಡ್’ ಹೆಸರನ್ನು ‘ಕೆಂಗೇರಿ ಕೋಟೆ ವಾರ್ಡ್’ ಎಂದು ಬದಲಾವಣೆ ಮಾಡಿರುವುದನ್ನು ಆಕ್ಷೇಪಿಸಿ ಕೆಂಗೇರಿಯ ಎಚ್.ಸಿ ಬಸವರಾಜಪ್ಪ ಸೇರಿದಂತೆ ಹೆಮ್ಮಿಗೆಪುರ ಹಾಗೂ ಆಜುಬಾಜಿನ 15 ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಯಾವುದೇ ಸಾರ್ವಜನಿಕ ಆಕ್ಷೇಪಣೆ ಆಲಿಸದೆಯೇ ಹೆಮ್ಮಿಗೆಪುರ ವಾರ್ಡ್ ಅನ್ನು ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಲಾಗಿದೆ. ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ರಾಜಕೀಯ ಕಾರಣಗಳಿಗಾಗಿ ಯಶವಂತಪುರ ಕ್ಷೇತ್ರದ ಹಾಲಿ ಶಾಸಕ ಎಸ್.ಟಿ. ಸೋಮಶೇಖರ್ ಆಣತಿಯಂತೆ ಹೆಸರು ಬದಲಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ನಿರ್ದಿಷ್ಟ ಭಾಗ ಮತ್ತು ಸಮುದಾಯದ ಮತಗಳನ್ನು ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆರೋಪಿಸಿದರು.
ಇದಕ್ಕೆ ನ್ಯಾಯಪೀಠ, ‘ಹೆಸರು ಬದಲಾವಣೆಗೆ ಸಂಬಂಧಿಸಿದ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ’ ರಾಜ್ಯ ಸರ್ಕಾರದ ಪರ ವಕೀಲರಿಗೆ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.