ADVERTISEMENT

ಹೆಣ್ಣೂರು ಮೇಲುಸೇತುವೆ ಕೆಳಗೆ ಲಾರಿಗಳ ಕಾರುಬಾರು, ಇದೇನು ಲಾರಿಗಳ ನಿಲ್ದಾಣವಾ?

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:38 IST
Last Updated 10 ಮಾರ್ಚ್ 2019, 19:38 IST
ಹೆಣ್ಣೂರು ಮೇಲುಸೇತುವೆ ಕೆಳಗಡೆ ನಿಲ್ಲಿಸಿರುವ ಮರಳು, ಜಲ್ಲಿಕಲ್ಲು ತುಂಬಿರುವ ಲಾರಿಗಳು
ಹೆಣ್ಣೂರು ಮೇಲುಸೇತುವೆ ಕೆಳಗಡೆ ನಿಲ್ಲಿಸಿರುವ ಮರಳು, ಜಲ್ಲಿಕಲ್ಲು ತುಂಬಿರುವ ಲಾರಿಗಳು   

ಹೆಣ್ಣೂರು ಜಂಕ್ಷನ್‌ ಬಳಿಯಲ್ಲಿರುವ ವರ್ತೃಲ (ರಿಂಗ್‌) ರಸ್ತೆಯ ಮೇಲುಸೇತುವೆ ಕೆಳಭಾಗದ ರಸ್ತೆಯಲ್ಲಿ ಮರಳು ಮತ್ತು ಜಲ್ಲಿಕಲ್ಲು ತುಂಬಿರುವ ಲಾರಿಗಳದ್ದೇ ಕಾರುಬಾರು. ಬೆಳಿಗ್ಗೆಯಿಂದ ರಾತ್ರಿಯವರೆಗೂ ದಿನದ 24 ಗಂಟೆಯೂ ಈ ಜಾಗ ಲಾರಿಗಳ ತಂಗುದಾಣವಾಗಿ ಬಿಟ್ಟಿದೆ! ಇದರಿಂದಾಗಿ ಇಲ್ಲಿನ ಸಾರ್ವಜನಿಕರು ಮತ್ತು ಇತರ ವಾಹನ ಸವಾರರು ಕಿರಿ ಕಿರಿ ಎದುರಿಸುವಂತಾಗಿದೆ.

ಲಾರಿಗಳ ಮಾಲೀಕರು ರಸ್ತೆಯಲ್ಲಿಯೇ ಮರಳು, ಜಲ್ಲಿಕಲ್ಲುಗಳ ವ್ಯಾಪಾರ ಕುದುರಿಸುತ್ತಾರೆ. ಗ್ರಾಹಕರು ಹಣ ಪಾವತಿಸಿ ಮರಳು ಅಥವಾ ಜಲ್ಲಿಕಲ್ಲು ತುಂಬಿದ ಲಾರಿಯನ್ನು ತೆಗೆದುಕೊಂಡು ಹೋದರೆ, ಕ್ಷಣಾರ್ಧದಲ್ಲಿಯೇ ಆ ಜಾಗವನ್ನು ಮತ್ತೊಂದು ಲಾರಿ ಆಕ್ರಮಿಸಿಕೊಳ್ಳುತ್ತದೆ.

ಮೇಲುಸೇತುವೆಯ ಕೆಳಭಾಗದ ರಸ್ತೆಯುದ್ದಕ್ಕೂ ಎಂಟರಿಂದ ಹತ್ತು ಅಡಿ ಅಗಲದ ಜಾಗ ಲಾರಿಗಳ ಪಾರ್ಕಿಂಗ್‌, ವ್ಯಾಪಾರ, ವಹಿವಾಟಿನ ಕೇಂದ್ರವಾಗಿ ಬಿಟ್ಟಿದೆ! ಅಷ್ಟಕ್ಕೂ ಇವೆಲ್ಲ ನಡೆಯುತ್ತಿರುವುದು ಅಲ್ಲಿನ ಪೊಲೀಸರ ಸಮ್ಮುಖದಲ್ಲಿಯೇ.

ADVERTISEMENT

ಅಲ್ಲಿಯೇ ಸಂಚಾರ ಪೊಲೀಸರೂ ಇದ್ದರೂ, ರಸ್ತೆಯಲ್ಲಿ ನಿಂತಿರುವ ಈ ಲಾರಿಗಳನ್ನು ಮುಂದಕ್ಕೆ ಹೋಗುವಂತೆ ಮಾಡುವುದಿಲ್ಲ. ಅದರ ಬದಲಿಗೆ ಪಾದಚಾರಿ ಮಾರ್ಗ, ನೋ ಪಾರ್ಕಿಂಗ್‌ ಪ್ರದೇಶದಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ದಂಡ ಹಾಕುವುದರಲ್ಲಿಯೇ ನಿರತರಾಗಿರುತ್ತಾರೆ ಎಂಬುದು ಇಲ್ಲಿನ ನಿವಾಸಿಗಳ ದೂರು.

ಈ ಮೇಲುಸೇತುವೆ ಬಳಿಯೇ ಹೆಣ್ಣೂರು ಬಿಎಂಟಿಸಿ ಬಸ್‌ ಡಿಪೊ (ಸಂಖ್ಯೆ 10) ಇದೆ. ಸಮೀಪದಲ್ಲಿಯೇ ಲಾರಿಗಳು ಒಂದರ ಹಿಂದೆ ಒಂದು ನಿಲ್ಲುವುದರಿಂದ ಬಿಎಂಟಿಸಿ ಬಸ್‌ಗಳು ಡಿಪೊ ಒಳಗೆ ಹೋಗಲು ಮತ್ತು ಹೊರಗೆ ಬರಲು ಕಷ್ಟಪಡುತ್ತವೆ. ಅಲ್ಲದೆ ಇತರ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಪಡಿಸುತ್ತಿವೆ ಎನ್ನುತ್ತಾರೆ ಹೆಣ್ಣೂರಿನ ನಿವಾಸಿ ಮುನಿರಾಜ್‌.

‘ಮೇಲು ಸೇತುವೆ ಕೆಳಗೆ ಲಾರಿಗಳು ನಿಲ್ಲಲು ಅವಕಾಶ ನೀಡಬಾರದು ಎಂದು ನಾಲ್ಕರಿಂದ ಐದು ತಿಂಗಳ ಹಿಂದೆ ಬಾಣಸವಾಡಿ ಸಂಚಾರ ವಲಯದ ಪೊಲೀಸರಿಗೆ ದೂರು ನೀಡಿದ್ದೇವೆ. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಅಲ್ಲಿ ನಿಂತಿದ್ದ ಲಾರಿಗಳ ಗಾಲಿಗಳ ಗಾಳಿಯನ್ನು ತೆಗೆದು ಎಚ್ಚರಿಕೆ ನೀಡಿದ್ದರು. ಆ ನಂತರ ಕೆಲ ಕಾಲ ಅಲ್ಲಿ ಲಾರಿಗಳು ನಿಲ್ಲುತ್ತಿರಲಿಲ್ಲ. ಆದರೆ ಇದೀಗ ಪುನಃ ಲಾರಿಗಳು ಮೇಲುಸೇತುವೆಯ ಎರಡೂ ಬದಿಯಲ್ಲಿ ನಿಲ್ಲಲು ಆರಂಭಿಸಿವೆ. ಇದರಿಂದ ಇಲ್ಲಿನ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗೆ ಕಾಚರಕನಹಳ್ಳಿಯಲ್ಲಿ ನಡೆದಿದ್ದ ಜನಸಂಪರ್ಕ ಸಭೆಯಲ್ಲಿ ಈ ಸಮಸ್ಯೆಯನ್ನು ಬಿಬಿಎಂಪಿ ವಾರ್ಡ್‌ ಸದಸ್ಯರು ಮತ್ತು ಸ್ಥಳೀಯ ಪೊಲೀಸರ ಗಮನಕ್ಕೆ ತರಲಾಗಿತ್ತು. ಆದರೆ ಅದಿನ್ನೂ ಪರಿಹಾರವಾಗಿಲ್ಲ ಎನ್ನುತ್ತಾರೆ ಅವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.