ಬೆಂಗಳೂರು: ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಮಾರ್ವೇಶ್ (19) ಸಾವಿನ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಇದೊಂದು ಕೊಲೆ ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಸ್ಥಳೀಯ ನಿವಾಸಿ ಮಾರ್ವೇಶ್, ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಇವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ರೌಡಿ ಹಾಗೂ ಈತನ ಸಹಚರರು ಕೃತ್ಯ ಎಸಗಿರುವ ಅನುಮಾನವಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದ ಮಾರ್ವೇಶ್, ಪರಿಚಯಸ್ಥ ಯುವತಿಯೊಬ್ಬರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರೆಂದು ಗೊತ್ತಾಗಿದೆ. ಯುವತಿಯ ಸ್ನೇಹಿತನಾಗಿರುವ ರೌಡಿ, ಸಂದೇಶ ನೋಡಿ ಕೋಪಗೊಂಡಿದ್ದ.’
‘ಕಾಲೇಜು ಬಳಿ ಮಾರ್ವೇಶ್‌ನನ್ನು ಅಡ್ಡಗಟ್ಟಿದ್ದ ರೌಡಿ ಹಾಗೂ ಇತರರು, ಹಲ್ಲೆ ಮಾಡಿದ್ದರು. ಪೈಪ್‌ಗಳಿಂದ ಹೊಡೆದಿದ್ದರು. ತೀವ್ರ ಗಾಯಗೊಂಡಿದ್ದ ಮಾರ್ವೇಶ್ ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಮೂಲಗಳು ತಿಳಿಸಿವೆ.
‘ರಸ್ತೆಯಲ್ಲಿ ಬಿದ್ದಿದ್ದ ಮಾರ್ವೇಶ್ ಅವರನ್ನು ಸ್ನೇಹಿತರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಮಾರ್ವೇಶ್ ಮೃತಪಟ್ಟಿರುವುದಾಗಿ ಹೇಳಿದರು.’
‘ಸಾವಿನ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಯಿತು. ಪ್ರತ್ಯಕ್ಷದರ್ಶಿಗಳು ಹಾಗೂ ಪೋಷಕರಿಂದ ಹೇಳಿಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.