ADVERTISEMENT

ಗ್ರಾಮಸಭೆ: ಸಮಸ್ಯೆಗಳ ಬಿಡಿಸಿಟ್ಟ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 19:25 IST
Last Updated 25 ಅಕ್ಟೋಬರ್ 2018, 19:25 IST
ಗ್ರಾಮಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಆರ್.ಸುಧಾ ರವಿಕುಮಾರ್‌ ಭಾಗವಹಿಸಿದ್ದರು
ಗ್ರಾಮಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಆರ್.ಸುಧಾ ರವಿಕುಮಾರ್‌ ಭಾಗವಹಿಸಿದ್ದರು   

ಬೆಂಗಳೂರು: ಹೆಸರಘಟ್ಟ ಸಮೀಪದ ಸೊಂಡೇಕೊಪ್ಪ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆಎಳೆ ಎಳೆಯಾಗಿ ಬಿಡಿಸಿಟ್ಟರು.

‘ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮನೆಬಾಡಿಗೆ ಭತ್ಯೆ ಸಿಗದ ಕಾರಣ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಶಿಕ್ಷಕರಿಗೆ ಭತ್ಯೆ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆಅನುವು ಮಾಡಿಕೊಡಿ’ ಎಂದು ಗ್ರಾಮಸ್ಥರು ಕ್ಷೇತ್ರ ಶಿಕ್ಷಾಣಾಧಿಕಾರಿಗೆ ಕೇಳಿಕೊಂಡರು.

ಯಲಹಂಕ ಉತ್ತರವಲಯ–1ರ ಕ್ಷೇತ್ರ ಶಿಕ್ಷಾಣಾಧಿಕಾರಿ ರಮೇಶ್‌, ‘ಭತ್ಯೆ ವಿಳಂಬವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಶೀಘ್ರದಲ್ಲಿಯೇ ಈ ಸಮಸ್ಯೆ ಬಗೆಹರಿಯಲಿದೆ’ ಎಂದರು.

ADVERTISEMENT

‘ಕೃಷಿ ಹೊಂಡಗಳಿಗಾಗಿ ಕೊಡುತ್ತಿರುವ ತಾಡಪಲ್‌ ಅತ್ಯಂತ ಕಳಪೆ ದರ್ಜೆಯಲ್ಲಿದ್ದು, ಗುಣಮಟ್ಟದ ತಾಡಪಲ್‌ ನೀಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉತ್ತರ ವಲಯದ ಮೇಲ್ವಿಚಾರಕ ನಾಗರಾಜ್‌ ಒಂದು ಪಡಿತರ ಚೀಟಿ ಮಾಡಿಕೊಡಲು ₹900 ಲಂಚ ಕೇಳುತ್ತಾರೆ ಎಂದುಸೊಂಡೇಕೊಪ್ಪ ಗ್ರಾಮದ ನಿವಾಸಿ ಮೂರ್ತಿ ಆರೋಪಿಸಿದರು.ನಾಗರಾಜ್‌ ಈ ಆರೋಪವನ್ನು ನಿರಾಕರಿಸಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಗ್ರಾಮಸಭೆಗೆ ಬಂದ ಜನರಿಗೆ, ಅಧಿಕಾರಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿಲ್ಲವೆಂದು ಗ್ರಾಮಸ್ಥರು ಅತೃಪ್ತಿ ವ್ಯಕ್ತಪಡಿಸಿದರು. ‘ನಾವು ಊಟದ ವ್ಯವಸ್ಥೆ ಮಾಡಲು ತಯಾರಿದ್ದೆವು, ಆದರೆ ಅಧ್ಯಕ್ಷರೇ ಬೇಡವೆಂದರು’ ಎಂದು ಪಂಚಾಯಿತಿ ಸದಸ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.