ADVERTISEMENT

ಸರ್ಕಾರದಿಂದ ವಿವರಣೆ ಕೇಳಿದ ಹೈಕೋರ್ಟ್‌

ಎಚ್‌.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ ವಿರುದ್ಧದ ಭೂ ಕಬಳಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:37 IST
Last Updated 7 ಜನವರಿ 2020, 19:37 IST
   

ಬೆಂಗಳೂರು: ‘ಶಾಸಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರ ಸಂಬಂಧಿ ಸಾವಿತ್ರಮ್ಮ ವಿರುದ್ಧ ಕೇತಗಾನಹಳ್ಳಿ ಭೂ ಕಬಳಿಕೆ ಆರೋಪ ಪ್ರಕರಣದ ಬಗ್ಗೆ 2014ರಲ್ಲಿ ಲೋಕಾಯುಕ್ತರು ಹೊರಡಿಸಿದ್ದ ಆದೇಶದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಈ ಕುರಿತಂತೆ ಸಮಾಜ ಪರಿವರ್ತನಾ ಸಮಯದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಭೂ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಲೋಕಾಯುಕ್ತ 2014ರ ಆಗಸ್ಟ್‌ 5ರಂದು ಆದೇಶಿಸಿದೆ. ಆದರೆ, ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿರುವ 54 ಎಕರೆ ತೆರವುಗೊಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನ್ಯಾಯಪೀಠಕ್ಕೆ ದೂರಿದರು.

ADVERTISEMENT

ಕೋರಿಕೆ ಏನು?: ‘ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಆ ಜಮೀನಿನ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ಸುಮಾರು ₹ 75 ಲಕ್ಷದಿಂದ ₹ 1 ಕೋಟಿವರೆಗೆ ಇದೆ. ಆ ಜಮೀನನನ್ನು ಕುಮಾರಸ್ವಾಮಿ ಮತ್ತಿತರರು ಪ್ರತಿ ಎಕರೆಗೆ ₹ 5 ಸಾವಿರದಂತೆ ಖರೀದಿಸಿದ್ದಾರೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ವಿರುದ್ಧವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟವಾಗಿದೆ. ಆದ್ದರಿಂದ, ಲೋಕಾಯುಕ್ತರ ಆದೇಶದಂತೆ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು‘ ಎಂಬುದು ಅರ್ಜಿದಾರರ ಕೋರಿಕೆ. ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.