ADVERTISEMENT

ನ್ಯಾಯದಾನ: ರಾಜ್ಯಕ್ಕೆ 6ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 22:31 IST
Last Updated 20 ಜನವರಿ 2020, 22:31 IST
   

ಬೆಂಗಳೂರು: ದೇಶದಾದ್ಯಂತ ಸಾರ್ವಜನಿಕರಿಗೆ ನ್ಯಾಯದಾನ ಮಾಡುವ ರಾಜ್ಯವಾರು ಶ್ರೇಣಿಯಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ.

ಸಾಮಾಜಿಕ ನ್ಯಾಯ ಕೇಂದ್ರ, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್, ಲೀಗಲ್ ಪಾಲಿಸಿ ಹಾಗೂ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ‘ಟಾಟಾ ಟ್ರಸ್ಟ್’ ಇದೇ ಮೊದಲ ಬಾರಿಗೆ ಸಂಗ್ರಹಿಸಿರುವ ಅಂಕಿ ಅಂಶಗಳ ಆಧಾರದಲ್ಲಿ ಈ ಶ್ರೇಣಿ ಪ್ರಕಟಿಸಲಾಗಿದೆ.

‘ಪೊಲೀಸ್, ನ್ಯಾಯಾಂಗ, ಕಾರಾಗೃಹ, ಕಾನೂನು ನೆರವು ವಿಭಾಗಗಳಿಂದ ಅಧಿಕೃತ ಅಂಕಿ ಅಂಶಗಳನ್ನು ಪಡೆದು, 18 ತಿಂಗಳ ಅವಧಿಯ ಅಧ್ಯಯನದ ನಂತರ ಈ ವರದಿ ಸಿದ್ಧಪಡಿಸಲಾಗಿದೆ. ಭಾರತದ ನ್ಯಾಯಾಂಗ ವರದಿ (ಐಜೆಆರ್) - 2019 ಹೆಸರಿನ ಈ ವರದಿಯನ್ನು ಎಲ್ಲ ರಾಜ್ಯ ಸರ್ಕಾರಗಳಿಗೂ ಶೀಘ್ರವೇ ಒಪ್ಪಿಸಲಾಗುತ್ತದೆ’ ಎಂದು ಟಾಟಾ ಟ್ರಸ್ಟ್‌ ಮುಖ್ಯಸ್ಥ ಶಿರೀನ್ ವಕೀಲ್ ತಿಳಿಸಿದ್ದಾರೆ.

ADVERTISEMENT

18 ದೊಡ್ಡ ಮತ್ತು ಮಧ್ಯಮ ರಾಜ್ಯಗಳ ಪೈಕಿ (1 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ರಾಜ್ಯಗಳು) ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, (10ಕ್ಕೆ 5.92 ಅಂಕಗಳು), ಕೇರಳ, ತಮಿಳುನಾಡು, ಪಂಜಾಬ್ ಮತ್ತು ಹರಿಯಾಣ ನಂತರದ ಸ್ಥಾನಗಳಲ್ಲಿವೆ.

‘5.11 ಅಂಕ ಪಡೆದಿರುವ ಕರ್ನಾಟಕ 6ನೇ ಸ್ಥಾನದಲ್ಲಿದೆ. 7 ಸಣ್ಣ ರಾಜ್ಯಗಳ ಪೈಕಿ (1 ಕೋಟಿಗೂ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳು) ಗೋವಾ (4.85) ಮೊದಲ ಸ್ಥಾನದಲ್ಲಿದ್ದು, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ ನಂತರದ ಸ್ಥಾನದಲ್ಲಿವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.