ADVERTISEMENT

277 ಅಕ್ರಮ ಧಾರ್ಮಿಕ ಕಟ್ಟಡ ನಿರ್ಮಾಣ

ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 21:05 IST
Last Updated 26 ಫೆಬ್ರುವರಿ 2021, 21:05 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ನಗರದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಸುಪ್ರೀಂ ಕೋರ್ಟ್‌ 2009ರಲ್ಲಿ ಆದೇಶ ನೀಡಿದ ನಂತರ ನಗರದಲ್ಲಿ 277 ಕಟ್ಟಡಗಳು ನಿರ್ಮಾಣವಾಗಿದೆ’ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿತು. ಇವುಗಳ ವಿರುದ್ಧ ಕ್ರಮ ಕೈಗೊಂಡ ವರದಿಯನ್ನು ಮಾ.26ರೊಳಗೆ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತು.

‘ಸುಪ್ರೀಂ ಕೋರ್ಟ್‌ ಆದೇಶಕ್ಕೂ ಮುನ್ನ ನಗರದಲ್ಲಿ 1,893 ಧಾರ್ಮಿಕ ಕಟ್ಟಡಗಳು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗಿವೆ. ಇವುಗಳಲ್ಲಿ 1,548 ಕಟ್ಟಡಗಳನ್ನು ಕ್ರಮಬದ್ಧಗೊಳಿಸಬಹುದು. 105 ಕಟ್ಟಡಗಳನ್ನು ಸ್ಥಳಾಂತರ ಮಾಡಬಹುದು ಮತ್ತು 240 ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ. ನಾಲ್ಕು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ’ ಎಂದು ಪಾಲಿಕೆ ಪ್ರಮಾಣಪತ್ರದಲ್ಲಿ ತಿಳಿಸಿದೆ.

ನಗರದಲ್ಲಿ ಕೇವಲ 70 ಅಕ್ರಮ ಧಾರ್ಮಿಕ ಕಟ್ಟಡಗಳಿವೆ ಎಂದು ಬಿಬಿಎಂಪಿ ಈ ಹಿಂದೆ ವಿವರ ಸಲ್ಲಿಸಿತ್ತು. ಪಾಲಿಕೆಯನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತ್ತು. ಅಫಿಡವಿಟ್ ಪರಿಶೀಲಿಸಿ ಪೀಠ, ಮಾ.26ಕ್ಕೆ ವಿಚಾರಣೆ ನಿಗದಿ ಮಾಡಿತು.

ADVERTISEMENT

ಸರ್ಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ 2009ರ ಸೆಪ್ಟೆಂಬರ್‌ 29ರಂದು ಆದೇಶ ನೀಡಿತ್ತು. ಈ ಆದೇಶ ಪಾಲನೆ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಮೇಲುಸ್ತುವಾರಿ ವಹಿಸುವಂತೆ ಎಲ್ಲ ಹೈಕೋರ್ಟ್‌ಗಳಿಗೆ 2018ರ ಜ.3ರಂದು ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.