ADVERTISEMENT

ಕೊಳಚೆ ನಿರ್ಮೂಲನಾ ಮಂಡಳಿಗೆ ಹೈಕೋರ್ಟ್‌ ತಪರಾಕಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 19:47 IST
Last Updated 13 ನವೆಂಬರ್ 2018, 19:47 IST
ದಿನೇಶ್‌ ಮಾಹೇಶ್ವರಿ
ದಿನೇಶ್‌ ಮಾಹೇಶ್ವರಿ   

ಬೆಂಗಳೂರು: ‘ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ಸರ್ವೆ ನಂಬರ್ 90ರಲ್ಲಿನ 21 ಕುಟುಂಬಗಳಿಗೆ ಇನ್ನೂ ಏಕೆ ಪುನರ್ವಸತಿ ಕಲ್ಪಿಸಿಲ್ಲ’ ಎಂದು ಹೈಕೋರ್ಟ್‌ ಕೊಳಚೆ ನಿರ್ಮೂಲನಾ ಮಂಡಳಿಗೆ ಚಾಟಿ ಬೀಸಿದೆ.

ಈ ಕುರಿತಂತೆ ‘ಅಭಯ’ ಹೆಸರಿನ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೊಳಚೆ ನಿರ್ಮೂಲನಾ ಮಂಡಳಿ ಪರ ವಕೀಲ ಶ್ರೀಕಾಂತ್ ಪಾರ್ಥಸಾರಥಿ, ‘ತಾತ್ಕಾಲಿಕ ನಿವೇಶನ ನೀಡಲು ಗುರುತಿಸಿರುವ ಭುವನೇಶ್ವರಿ ಪ್ರದೇಶದಲ್ಲಿ ಒಳಚರಂಡಿ ಪೈಪ್‌ಗಳು ಇವೆ. ಹೀಗಾಗಿ ನಿವಾಸಿಗಳಿಗೆ ಬೇರೊಂದು ಕಡೆ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

ಇದಕ್ಕೆ ಗರಂ ಆದ ದಿನೇಶ್ ಮಾಹೇಶ್ವರಿ, ‘ಭುವನೇಶ್ವರಿ ನಗರದಲ್ಲಿ ಅರ್ಜಿದಾರರಿಗೆ ಸೂರು ಕಲ್ಪಿಸಲಾಗುವುದು ಎಂದು ಈ ಹಿಂದಿನ ವಿಚಾರಣೆ ವೇಳೆ ನೀವೇ ಹೇಳಿದ್ದಿರಿ. ಈ ಹೇಳಿಕೆಯನ್ನಾಧರಿಸಿಯೇ ಕೋರ್ಟ್ ಆದೇಶ ಮಾಡಿದೆ. ಆದರೆ, ಈ ಹಂತದಲ್ಲಿ ನೀವು ಭುವನೇಶ್ವರಿ ಪ್ರದೇಶದಲ್ಲಿ ತೊಂದರೆ ಇದೆ ಎಂದು ಹೇಳುತ್ತಿರುವುದು ಸಮಂಜಸವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಏನೇ ಆಗಲಿ ನಾಳೆಯೊಳಗೆ ನೀವು ಅರ್ಜಿದಾರರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿ ಕೋರ್ಟ್‌ಗೆ ತಿಳಿಸಬೇಕು. ಬೆಳಿಗ್ಗೆ ಮೊದಲ ಪ್ರಕರಣದಲ್ಲೇ ವಿಚಾರಣೆ ನಡೆಸುತ್ತೇವೆ’ ಎಂದು ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ (ನ.14) ಮುಂದೂಡಿದರು.

ಅರ್ಜಿದಾರರ ಪರ ವಕೀಲ ಕೆ.ಬಿ.ಓಂಕಾರ್ ಹಾಜರಿದ್ದರು.

**

ಅಧಿಕಾರಿಗಳು ಆಟವಾಡುತ್ತಿದ್ದಾರೆಯೇ?

‘ತಾತ್ಕಾಲಿಕ ಪುನರ್ವಸತಿ ಕಲ್ಪಿಸಿ ಎಂದು ಹೈಕೋರ್ಟ್‌ ಅಕ್ಟೋಬರ್ 30ರಂದೇ ಆದೇಶಿಸಿದೆ. ಆದರೆ, ಇಷ್ಟು ದಿನ ನೀವು ಏಕೆ ಸುಮ್ಮನಿದ್ದಿರಿ’ ಎಂದು ಶ್ರೀಕಾಂತ್ ಅವರನ್ನು ದಿನೇಶ್‌ ಮಾಹೇಶ್ವರಿ ತರಾಟೆಗೆ ತೆಗೆದುಕೊಂಡರು.

‘ಈ ವಿಷಯವನ್ನು ಕೋರ್ಟ್ ಗಮನಕ್ಕೆ ತರದೇ ಹೋದದ್ದಕ್ಕೆ ಕಾರಣವೇನು, ನಿಮ್ಮದು ಅತಿಯಾಯಿತು. ಅಧಿಕಾರಿಗಳು ಆಟವಾಡುತ್ತಿದ್ದಾರೆಯೇ, ನಾನು ನಾಳೆಯೇ ನಿಮ್ಮ ಕಮಿಷನರ್ ಅವರನ್ನು ಕರೆಸುತ್ತೇನೆ. ಇಂಥ ಸಬೂಬುಗಳನ್ನು ಒಪ್ಪಲು ಸಾಧ್ಯವಿಲ್ಲ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ’ ಎಂದು ಕಟುವಾಗಿ ಎಚ್ಚರಿಸಿದರು.

**

ಇದೊಂದು, ಮಾನವೀಯತೆಯ ನೆಲೆಗಟ್ಟಿನಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕಿರುವ ಪ್ರಕರಣ. ಆದರೆ, ನೀವು ಕೋರ್ಟ್ ಆದೇಶಕ್ಕೆ ಅಸಡ್ಡೆ ತೋರಿದ್ದೀರಿ.
- ದಿನೇಶ್‌ ಮಾಹೇಶ್ವರಿ, ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.