ADVERTISEMENT

ಒತ್ತುವರಿ ತೆರವಿಗೆ ಏನು ಅಡ್ಡಿ?| ಪಾಲಿಕೆಗೆ ತೀವ್ರ ತರಾಟೆ ತೆಗೆದುಕೊಂಡ ಹೈಕೋರ್ಟ್

ಮಲ್ಲೇಶ್ವರದ ವೆಂಕಟೇಶ್ವರ ರಾಜಗೋಪುರ:

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:56 IST
Last Updated 18 ಜೂನ್ 2019, 19:56 IST
ಎ.ಎಸ್‌.ಓಕಾಮುಖ್ಯ ನ್ಯಾಯಮೂರ್ತಿಗಳು
ಎ.ಎಸ್‌.ಓಕಾಮುಖ್ಯ ನ್ಯಾಯಮೂರ್ತಿಗಳು   

ಬೆಂಗಳೂರು: ‘ಸರ್ಕಾರದ ಜಾಗ ಒತ್ತುವರಿ ಆಗಿದೆ ಎಂಬುದು ವಿದಿತವಾದ ಮೇಲೆ ಅದನ್ನು ತೆರವುಗೊಳಿಸಲು ಏನು ಅಡ್ಡಿ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

‘ಮಲ್ಲೇಶ್ವರ 16ನೇ ಅಡ್ಡರಸ್ತೆಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಸ್ಥಾನದ ರಾಜಗೋಪುರ ನಿರ್ಮಿಸಲಾಗಿದೆ’ ಎಂದು ಆಕ್ಷೇಪಿಸಿ ಎಚ್‌.ಎನ್‌.ಎ ಪ್ರಸಾದ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಸಾರ್ವಜನಿಕ ರಸ್ತೆ ಒತ್ತುವರಿ ಆಗಿರುವುದು ನಿಜ. ಆದರೆ, ಈ ಒತ್ತುವರಿ ತೆರವುಗೊಳಿಸಲು ರೈಲ್ವೆ ಇಲಾಖೆ ಮುಂದಾಗಬೇಕಿದೆ. ಅಂತೆಯೇ ದೇವಾಲಯ ನಿರ್ಮಾಣ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಕಟ್ಟಡ ಪರವಾನಗಿ ಪಡೆದಿದೆಯೋ ಇಲ್ಲವೋ ಎಂಬುದನ್ನೂ ಪರಿಶೀಲಿಸಬೇಕಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

ಈ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಓಕಾ ಅವರು, ‘ಒತ್ತುವರಿ ಜಾಗ ಬಿಬಿಎಂಪಿಗೆ ಸೇರಿದೆ ಎಂದ ಮೇಲೆ ಅಲ್ಲಿ ರೈಲ್ವೆ ಇಲಾಖೆ ಏಕೆ ಕ್ರಮ ಕೈಗೊಳ್ಳಬೇಕು’ ಎಂದು ಮೌಖಿಕ ಚಾಟಿ ಬೀಸಿದರು.

‘ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಅಕ್ರಮವಾಗಿ ದೇವಸ್ಥಾನ ಕಟ್ಟಿದರೆ ನೀವು ಒಂದು ನೋಟಿಸ್ ಕೂಡಾ ನೀಡಿಲ್ಲ. ನಿಮ್ಮ ಮೌನ ನಡೆ ಸೂಕ್ತವಾಗಿ ಕಾಣುತ್ತಿಲ್ಲ. ಇಂತಹ ವಿಚಾರಗಳನ್ನು ಕೋರ್ಟ್‌ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

‘ಒತ್ತುವರಿ ತೆರವುಗೊಳಿಸಲು ಏನು ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ಒಂದು ವಾರದಲ್ಲಿ ತಿಳಿಸಿ’ ಎಂದು ಇದೇ 25ಕ್ಕೆ ವಿಚಾರಣೆ
ಮುಂದೂಡಿದರು.

‘ಒತ್ತುವರಿ ಮಾಡಿ ರಾಜಗೋಪುರ ನಿರ್ಮಾಣ’
‘ಮಲ್ಲೇಶ್ವರ ಪಶ್ಚಿಮದ 16 ಮತ್ತು 17ನೇ ಅಡ್ಡರಸ್ತೆಗೆ ಸಂಪರ್ಕ ಕಲ್ಪಿಸುವ 14 ನೇ ಮುಖ್ಯ ರಸ್ತೆಯಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‌ನವರು 40 ಅಡಿ ವಿಸ್ತೀರ್ಣದಲ್ಲಿ ದೇವಸ್ಥಾನದ ರಾಜಗೋಪುರ ನಿರ್ಮಿಸಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

‘ರಾಜಗೋಪುರ ನಿರ್ಮಾಣದಿಂದ ವಾಹನ ಸವಾರರು, ಮಕ್ಕಳು, ಮಹಿಳೆಯರು ಸೇರಿದಂತೆ ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಒತ್ತುವರಿ ಭಾಗವನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ರೈಲ್ವೆ ಇಲಾಖೆಗೆ ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.

‘ಕಾನೂನು ಗೊತ್ತಿಲ್ಲ ಎಂದಾದರೆ ಗೊತ್ತು ಮಾಡುತ್ತೇವೆ’
‘ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ದೇಶದ ಎಲ್ಲ ಪೌರಾಡಳಿತ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಆದರೆ ಈ ಸಂಗತಿ ಬಿಬಿಎಂಪಿಗೆ ಗೊತ್ತಿಲ್ಲವೇ’ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಕಿಡಿ ಕಾರಿದರು.

‘ಕಾನೂನು ಮತ್ತು ಕಾಯ್ದೆ ಬಿಬಿಎಂಪಿಗೆ ಗೊತ್ತಿದೆ ಎಂದು ನ್ಯಾಯಾಲಯ ಭಾವಿಸುತ್ತದೆ. ಒಂದೊಮ್ಮೆ ಗೊತ್ತಿಲ್ಲ ಎಂದಾದರೆ ಅದನ್ನು ಗೊತ್ತು ಮಾಡುವುದು ನಮಗೆ ಚೆನ್ನಾಗಿ ಗೊತ್ತಿದೆ’ ಎಂದು ಬಿಬಿಎಂಪಿಗೆ ಎಚ್ಚರಿಕೆ ನೀಡಿದರು.

**

ಅಕ್ರಮವಾಗಿ ನಿರ್ಮಿಸಿದ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪಾಲಿಸಲು ಬಿಬಿಎಂಪಿಗೆ ಏನು ಕಷ್ಟ?
-ಅಭಯ್‌ ಎಸ್‌.ಓಕಾ,ಮುಖ್ಯ ನ್ಯಾಯಮೂರ್ತಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.