ಕರ್ನಾಟಕ ಹೈಕೋರ್ಟ್
ಬೆಂಗಳೂರು: ‘ಇಳಿವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ' ಎಂಬ ನಂಬಿಕೆಯಿಂದ ತಮ್ಮ ಬದುಕಿಗೆ ಆಧಾರವಾಗಿದ್ದ 2.4 ಎಕರೆ ಜಮೀನನ್ನು ಪುತ್ರಿಯರಿಬ್ಬರ ಹೆಸರಿಗೆ ಬರೆದಿದ್ದ ವೃದ್ಧರೊಬ್ಬರು, ಮಕ್ಕಳ ಕುತಂತ್ರದಿಂದ ನಿರಾಶ್ರಿತರಾದ ಹಿನ್ನೆಲೆಯಲ್ಲಿ ಹೈಕೋರ್ಟ್, ಗಿಫ್ಟ್ ಡೀಡ್ ರದ್ದುಪಡಿಸಿದೆ.
ಈ ಸಂಬಂಧ ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿ ದೊಡ್ಡಗೊಲ್ಲಹಳ್ಳಿ ವೆಂಕಟಯ್ಯ (84) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಅಂತೆಯೇ, ಉಪ ವಿಭಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು; ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಮತ್ತು ಕಲ್ಯಾಣ ಕಾಯ್ದೆ-2007ರ ಅನ್ವಯ ರದ್ದುಪಡಿಸಿದೆ.
"ಹಿರಿಯ ನಾಗರಿಕರು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ವಿಶ್ವಾಸಾರ್ಹ ಸ್ವಭಾವ ಹೊಂದಿರುತ್ತಾರೆ ಮತ್ತು ಮಕ್ಕಳ ಮೇಲೆ ಭಾವನಾತ್ಮಕ ಮತ್ತು ಆರ್ಥಿಕ ಅವಲಂಬನೆ ಹೊಂದಿರುತ್ತಾರೆ. ಇದು ಕಾನೂನಿನಿಂದಲೂ ಗುರುತಿಸಲಾದ ಸಾಮಾಜಿಕ ವಾಸ್ತವ" ಎಂದು ವಿವರಿಸಿರುವ ನ್ಯಾಯಪೀಠ, "ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿ ವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆಗಳು ಮತ್ತು ಕೌಟುಂಬಿಕ ಬಂಧಗಳನ್ನು ಅವಲಂಬಿಸಬೇಕು" ಎಂದು ಅಭಿಪ್ರಾಯಪಟ್ಟಿದೆ.
‘‘ಹಿರಿಯ ನಾಗರಿಕರನ್ನು ಅವರ ವೃದ್ಧಾಪ್ಯದಲ್ಲಿ ಆರೈಕೆ ಮಾಡದೆ ಅವರ ಜೀವನ ನಿರ್ವಹಣೆಗೆ ನೆರವಾಗದೆ ಹೋದ ಸಂದರ್ಭದಲ್ಲಿ ನ್ಯಾಯಾಲಯ ರಕ್ಷಣೆಗೆ ಧಾವಿಸಿ ಆಸ್ತಿಯನ್ನು ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡುತ್ತದೆ’’ ಎಂದು ತಿಳಿಸಿದೆ.
ಪ್ರಕರಣವೇನು?: ವೆಂಕಟಯ್ಯ ಅವರಿಗೆ ಪುತ್ರಿಯರು, "ಚೆನ್ನಾಗಿ ನೋಡಿಕೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಶಿವಮ್ಮ ಮತ್ತು ಪುಟ್ಟಮ್ಮನವರಿಗೆ ತಮ್ಮ ಹೆಸರಿನಲ್ಲಿದ್ದ 2.4 ಎಕರೆ ಕೃಷಿ ಭೂಮಿಯನ್ನು ಗಿಫ್ಟ್ ಡೀಡ್ (ಉಡುಗೊರೆ ಪತ್ರ) ಮೂಲಕ ವರ್ಗಾವಣೆ ಮಾಡಿದ್ದರು.
ನಂತರ, "ಪುತ್ರಿಯರು ಕೊಟ್ಟ ಮಾತಿನಂತೆ ನನ್ನನ್ನು ನೋಡಿಕೊಳ್ಳಲು ವಿಫಲವಾಗಿದ್ದಾರೆ" ಎಂದು ಆರೋಪಿಸಿ, ಗಿಫ್ಟ್ ಡೀಡ್ ರದ್ದು ಕೋರಿ ಉಪ ವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು.
ನ್ಯಾಯಮಂಡಳಿ 2023ರ ಡಿಸೆಂಬರ್ 19ರಂದು ದೂರನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಜಿಲ್ಲಾಧಿಕಾರಿ 2024ರ ಅಕ್ಟೋಬರ್ 22ರಂದು ಎತ್ತಿ ಹಿಡಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.