ADVERTISEMENT

ದರಪಟ್ಟಿ ಪ್ರಕಟಣೆ ಖಚಿತಪಡಿಸಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 21:06 IST
Last Updated 15 ಡಿಸೆಂಬರ್ 2020, 21:06 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಶುಲ್ಕದ ದರಪಟ್ಟಿ ಪ್ರಕಟಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡದೆ.

ಚಿಕಿತ್ಸಾ ದರ ನಿಗದಿ ಮಾಡಿ 2020ರ ಜೂನ್ 23ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದನ್ನು ಮೀರಿ ಹೆಚ್ಚಿನ ಶುಲ್ಕವನ್ನು ರೋಗಿಗಳಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಸರ್ಕಾರ ಶಿಫಾರಸು ಮಾಡುವ ರೋಗಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂಬ ಫಲಕವನ್ನೂ ಪ್ರದರ್ಶಿಸುವುದು ಸೂಕ್ತ. ಪಿಪಿಇ ಕಿಟ್ ಅಥವಾ ಇನ್ನಿತರ ಸಲಕರಣೆಗಳಿಗೂ ಶುಲ್ಕ ಪಾವತಿಸುವಂತಿಲ್ಲ ಎಂಬುದನ್ನೂ ಫಲಕ ಒಳಗೊಂಡಿರಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು’ ಎಂದು ಪೀಠ ತಿಳಿಸಿತು.‌

ADVERTISEMENT

‘ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪ್ರತಿನಿತ್ಯ 1 ಲಕ್ಷಕ್ಕೂ ಹೆಚ್ಚು ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್ ವರದಿ ನೀಡುವುದು ವಿಳಂಬ ಆಗುತ್ತಿರುವ ಬಗ್ಗೆ ಸರ್ಕಾರ ಕೂಡಲೇ ಪ್ರತಿಕ್ರಿಯಿಸಬೇಕು’ ಎಂದು ಪೀಠ ಹೇಳಿತು.

ಶರತ್ ವರ್ಗಾವಣೆ: ವಿಚಾರಣೆ ಮುಂದೂಡಿಕೆ
ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ. ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಡಿ.22ಕ್ಕೆ ಮುಂದೂಡಿದೆ.

ಬಿ.ಶರತ್ ಅವರ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿರುವ ಕ್ರಮವನ್ನು ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸಮರ್ಥಿಸಿಕೊಂಡರು.‌ ಮುಂದಿನ ವಿಚಾರಣೆಯನ್ನು ಡಿ.22ಕ್ಕೆ ಪೀಠ ನಿಗದಿಪಡಿಸಿತು.

ಮೈಸೂರು ಡಿ.ಸಿ.ಯಾಗಿ ವರ್ಗಾವಣೆಗೊಂಡಿದ್ದಶರತ್ ಅವರನ್ನು ಒಂದೇ ತಿಂಗಳಲ್ಲಿ ಬೇರೆಡೆಗೆ ವರ್ಗಾಯಿಸಿ ರೋಹಿಣಿ ಸಿಂಧೂರಿ ಸರ್ಕಾರ ನೇಮಿಸಿತ್ತು. ಇದನ್ನು ಪ್ರಶ್ನಿಸಿ ಶರತ್ ಸಿಎಟಿಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

‘ಅನಧಿಕೃತ ಧಾರ್ಮಿಕ ಕಟ್ಟಡ: ಅಫಿಡವಿಟ್ ಸಲ್ಲಿಸಿ’
2009ರ ಸುಪ್ರೀಂ ಕೋರ್ಟ್ ಆದೇಶದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ವಿವರವಾದ ಅನುಸರಣಾ ವರದಿಯನ್ನು ದಾಖಲೆ ಸಹಿತ ಸಲ್ಲಿಸಬೇಕು’ ಎಂದು ಹೇಳಿತು. ‘2009ರ ಸೆಪ್ಟೆಂಬರ್‌ ನಂತರ 106 ಧಾರ್ಮಿಕ ಕಟ್ಟಡಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಕೋರ್ಟ್‌ ನಂಬಬೇಕು ಎಂದು ಬಿಬಿಎಂಪಿ ಹೇಳುತ್ತಿದೆ. ಈ ಬಗ್ಗೆ ನೋಟಿಸ್ ನೀಡಿದ್ದರೂ, ಯಾವುದೇ ಪ್ರಯತ್ನ ನಡೆದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಶಿಕ್ಷಣ ಸಂಸ್ಥೆಗಳ ತಿದ್ದುಪಡಿ ಕಾಯ್ದೆ ರದ್ದು ಆದೇಶ ಎತ್ತಿ ಹಿಡಿದ ಹೈಕೋರ್ಟ್‌
ವೃತ್ತಿಪರ ಕೋರ್ಸುಗಳಿಗೆ ದಾಖಲಾಗಿರುವ ಸಾಗರೋತ್ತರ ಭಾರತೀಯ ನಾಗರಿಕರ (ಒಸಿಐ) ಕಾರ್ಡ್‌ ಹೊಂದಿರುವ ವಿದ್ಯಾರ್ಥಿಗಳನ್ನು ಭಾರತೀಯ ನಾಗರಿಕರಂತೆ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯ್ದೆಗೆ 2017ರಲ್ಲಿ ತಿದ್ದುಪಡಿ ಮಾಡಿರುವುದನ್ನು ರದ್ದುಪಡಿಸಿದ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎನ್‌.ಎಸ್. ಸಂಜಯ್‌ಗೌಡ ಒಳಗೊಂಡ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಕೇಂದ್ರದ ಪೌರತ್ವ ಕಾಯ್ದೆಗೆ ರಾಜ್ಯ ಕಾನೂನು ಮಣಿಯಬೇಕು ಎಂದು ತಿಳಿಸಿತು.

ಒಸಿಐ ಕಾರ್ಡುದಾರರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ‘ನೀಟ್ ಪರೀಕ್ಷೆಯಲ್ಲಿ ತಮ್ಮ ಶ್ರೇಯಾಂಕದ ಆಧಾರದ ಮೇಲೆ ಸರ್ಕಾರಿ ಕೋಟಾ ಸೀಟುಗಳು ಸೇರಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಆನ್‌ಲೈನ್ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅನುಮತಿ ನೀಡಬೇಕು’ ಎಂದು ವಿದ್ಯಾರ್ಥಿಗಳು ಕೋರಿದರು.

ಅರ್ಜಿದಾರರ ಕೋರಿಕೆ ಆಧರಿಸಿ ಅನುಮತಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ನ್ಯಾಯಪೀಠ ನಿರ್ದೇಶನ ನೀಡಿತು. ‘ವಸುದೈವ ಕುಟುಂಬಕಂ ಎಂಬ ಪ್ರಾಚೀನ ಭಾರತೀಯರ ಚಿಂತನೆಯನ್ನು ನೆನಪಿಸಲು ಬಯಸುತ್ತೇವೆ. ಇದರರ್ಥ ಜಗತ್ತೇ ಒಂದು ಕುಟುಂಬ’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.