ADVERTISEMENT

ತನಿಖಾಧಿಕಾರಿ ಖುದ್ದು ಹಾಜರಿಗೆ ಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 12:07 IST
Last Updated 19 ಜನವರಿ 2019, 12:07 IST
   

ಬೆಂಗಳೂರು:ಯುವ ವಕೀಲೆ ಧರಣಿ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ವಿ.ಸುರೇಶ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ ಸಿವಿಲ್ ಕೋರ್ಟ್ (71) ಹೆಚ್ಚುವರಿ ನ್ಯಾಯಾಧೀಶ ಮೋಹನ್ ಪ್ರಭು ವಿಚಾರಣೆ ನಡೆಸಿದರು.

ಪ್ರತಿವಾದಿಗಳಾದ ತನಿಖಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಧೀಶರು, ಈ ಕುರಿತಂತೆ ವಿವರಣೆ ನೀಡಲು
ಪ್ರಕರಣದ ತನಿಖಾಧಿಕಾರಿಯೂ ಆದ ಮಹದೇವಪುರ ವಿಭಾಗದ ಎಸಿಪಿ ಕೋರ್ಟ್ ಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸಿದರು.

ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದರು.

ADVERTISEMENT

‘ಆರೋಪಿ ವಿ.ಸುರೇಶ್ ಪರ ಯಾರೂ ವಕಾಲತ್ತು ವಹಿಸಬಾರದು’ಎಂದು ಬೆಂಗಳೂರು ವಕೀಲರ ವಲಯದಲ್ಲಿ ಒತ್ತಾಯ ಕೇಳಿಬಂದಿದ್ದ ಬೆನ್ನಲ್ಲೇ, ವಕೀಲ ಸೈಯ್ಯದ್ ಸಲ್ಮಾನ್ ಖೊಮೇನಿ ಅವರು ಸುರೇಶ್ ಪರ ವಕಾಲತ್ತು ಸಲ್ಲಿಸಿದ್ದರು. ಆದರೆ,ವಿಚಾರಣೆಗೆ ಹಾಜರಾಗಿರಲಿಲ್ಲ.

ವಿಚಾರಣೆ ವೇಳೆ ಕೋರ್ಟ್ ಹಾಲ್ ನಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯ ವಕೀಲರು ಜಮಾಯಿಸಿದ್ದರು. ಆರೋಪಿ ಪರ ಯಾರೂ ವಕಾಲತ್ತು ವಹಿಸಬಾರದು ಎಂದು ಒತ್ತಾಯ ಮಾಡಿದರು.

ವಕೀಲೆ ಧರಣಿ ಅವರು 2018ರ ಡಿಸೆಂಬರ್ 31ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಸುಮಾರು ವರ್ಷಗಳಿಂದ ಧರಣಿ ವಾಸವಿದ್ದ ಮನೆಯನ್ನು ಕಬಳಿಸಲು ಸ್ಥಳೀಯ ಪಾಲಿಕೆ ಸದಸ್ಯ ವಿ.ಸುರೇಶ್ ಹಾಗೂ ಅವರ ಸಹಚರರು ಕೊಲೆ ಬೆದರಿಕೆ ಹಾಕಿದ್ದರು ಇದರಿಂದಾಗಿ ಬೇಸತ್ತಿದ್ದ ಧರಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂಬುದು ವಕೀಲರ ಆರೋಪ.

‘ಉಪ ಮುಖ್ಯಮಂತ್ರಿ ಗಮನ ಹರಿಸಿಲ್ಲ’

‘ರಾಜ್ಯದಲ್ಲಿ ದಲಿತ ಉಪ ಮುಖ್ಯಮಂತ್ರಿ ಇದ್ದರೂ ದಲಿತ ವಕೀಲೆ ಧರಣಿ ಸಾವಿಗೆ ಇನ್ನೂ ಕಿವಿಗೊಟ್ಟಿಲ್ಲ’ ಎಂದುಜಸ್ಟೀಸ್ ಫಾರ್ ಅಡ್ವೊಕೇಟ್ ಧರಣಿಸಮಿತಿಯ ಮುಖಂಡ ಶೆಟ್ಟಿಗೆರೆ ದೇವದಾಸ್ ಆಕ್ಷೇಪಿಸಿದರು.

ಪ್ರಕರಣದ ವಿಚಾರಣೆ ನಂತರ ಮಾತನಾಡಿದ ಅವರು, "ಸರ್ಕಾರ ಸಾಮಾನ್ಯ ಜನರ ಸಂಕಷ್ಟಗಳನ್ನು ಮರೆತು ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದೆ. ರಾಜ್ಯದಲ್ಲಿ ಒಬ್ಬ ಯುವ ವಕೀಲೆಗೇ ರಕ್ಷಣೆ ಇಲ್ಲವೆಂದರೆ ಉಳಿದವರ ಪಾಡೇನು" ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.