ADVERTISEMENT

ಮತದಾರರ ಪಟ್ಟಿ: ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:22 IST
Last Updated 24 ಸೆಪ್ಟೆಂಬರ್ 2021, 22:22 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತೆಗೆದು ಹಾಕಲು ಇರುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತ ಚುನಾವಣಾ ಆಯೋಗಕ್ಕೆ(ಇಸಿಐ) ಹೈಕೋರ್ಟ್‌ ನಿರ್ದೇಶನ ನೀಡಿದೆ.

ವೈಟ್‌ಫೀಲ್ಡ್‌ ರೈಸಿಂಗ್ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ಪಟ್ಟಿಯಲ್ಲಿರುವ ಲೋಪ ಸರಿಪಡಿಸಲು, ಹೊಸ ಸೇರ್ಪಡೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ನಿರ್ದೇಶನ ನೀಡಲು ಅರ್ಜಿದಾರರು ಕೋರಿದ್ದರು.

ADVERTISEMENT

ಇಸಿಐ ಪರ ಹಾಜರಾಗಿದ್ದ ವಕೀಲ ಎಸ್.ಆರ್‌. ದೊಡವಾಡ, ‘ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದ ದೂರುಗಳ ಕಾಲಮಿತಿಯ ಪರಿಹಾರಕ್ಕೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ’ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಮತದಾರರ ಪಟ್ಟಿ ಮಾರ್ಪಡಿಸಲು ಸಲ್ಲಿಸಿದ ಅರ್ಜಿಯನ್ನು ಅಧಿಕಾರಿಗಳು ಪರಿಗಣಿಸದಿದ್ದರೆ ಯಾವುದೇ ವ್ಯಕ್ತಿಯಾದರೂ ಹೈಕೋರ್ಟ್ ಸಂಪರ್ಕಿಸಬಹುದು. ಜನಪ್ರತಿನಿಧಿ ಕಾಯ್ದೆ, ಮತದಾರರ ನೋಂದಣಿ ಕಾಯ್ದೆಯ ಅಡಿಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶ ಇದೆ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.