ADVERTISEMENT

ಅಕ್ರಮ ಕಟ್ಟಡ | ಸಣ್ಣ ಲೋಪಗಳಿದ್ದರೆ ಸಕ್ರಮಗೊಳಿಸಿ: ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 20:42 IST
Last Updated 6 ಜೂನ್ 2022, 20:42 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು:‘ಕಟ್ಟಡ ನಿರ್ಮಾಣದಲ್ಲಿ ಸಣ್ಣ–ಪುಟ್ಟ ಉಲ್ಲಂಘನೆಗಳಿದ್ದರೆ ನಿಯಮಾನುಸಾರ ದಂಡ ಕಟ್ಟಿಸಿಕೊಂಡು ಅಂಥವುಗಳನ್ನು ಸಕ್ರಮಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ)ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು ಮಹಾನಗರದಲ್ಲಿನ ಅನಧಿಕೃತ ಕಟ್ಟಡಗಳ ತೆರವು ಕುರಿತಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ಹಾಜರಿದ್ದ ಹಿರಿಯ ವಕೀಲ ನಂಜುಂಡರೆಡ್ಡಿ, ‘ಮಹಾನಗರದ ವ್ಯಾಪ್ತಿಯಲ್ಲಿ 2016ರ ಜನವರಿಯಿಂದ ಈಚೆಗೆ ನಿರ್ಮಿಸಲಾದ ಅನಧಿಕೃತ ಕಟ್ಟಡಗಳ ಸರ್ವೇ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿ‌ಯ ಎಂಟು ವಲಯಗಳಲ್ಲಿ 400 ರಿಂದ 500 ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ. ಒಟ್ಟು 36,759 ಕಟ್ಟಡ ನಕ್ಷೆಗಳಲ್ಲಿ 16 ಸಾವಿರ ಕಟ್ಟಡಗಳ ಸರ್ವೇ ನಡೆಸಲಾಗಿದ್ದು, ಕೆಲವು ಕಟ್ಟಡಗಳ ನೆಲಸಮಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದನ್ಯಾಯಪೀಠ, ‘ಈವರೆಗೆ ಎಷ್ಟು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ್ದೀರಿ, ಎಷ್ಟು ಸಕ್ರಮಗೊಳಿಸಿದ್ದೀರಿ ಮತ್ತು ಎಷ್ಟು ಕಟ್ಟಡಗಳಿಂದ ದಂಡ ಸಂಗ್ರಹ ಮಾಡಿದ್ದೀರಿ ಎಂಬುದರ ವಿವರ ನೀಡಿ’ ಎಂದು ಸೂಚಿಸಿತು.

ಇದಕ್ಕೆ ನಂಜುಂಡರೆಡ್ಡಿ, ‘ನಿಯಮ ಉಲ್ಲಂಘಿಸಿದ ಅಕ್ರಮ ಕಟ್ಟಡಗಳ ಮಾಲೀಕರಿಂದ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸುವ ಅಕ್ರಮ-ಸಕ್ರಮ ಕಾಯ್ದೆ ಸಿಂಧುತ್ವ ಪ್ರಶ್ನಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಹಾಗಾಗಿ, ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಲಾಗುತ್ತಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಎಷ್ಟು ಕಟ್ಟಡಗಳನ್ನು ಅನಧಿಕೃತ ಎಂದು ನೆಲಸಮ ಮಾಡಲು ಗುರುತಿಸಿದ್ದೀರಾ, ಎಷ್ಟು ಪ್ರಕರಣಗಳನ್ನು ನಕ್ಷೆ ಉಲ್ಲಂಘನೆ ಎಂದು ಸಕ್ರಮಗೊಳಿಸಲು ಗುರುತಿಸಿದ್ದೀರಾ ಎಂಬ ಬಗ್ಗೆ ಹತ್ತು ದಿನಗಳ ಒಳಗೆ ಸಮಗ್ರ ಮಾಹಿತಿ ನೀಡಿ’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿತು.

‘ಸಮಯ ಪೋಲು ಮಾಡಬೇಡಿ’‌
‘ಸಾರ್ಜನಿಕರು ಪ್ರತಿ‌ದಿನವೂ ನಿಮ್ಮ ಕಚೇರಿಗಳ ಸುತ್ತ ತಿರುಗುವ ಅಗತ್ಯವಿಲ್ಲ. ಸಣ್ಣಪುಟ್ಟ ಉಲ್ಲಂಘನೆ ಕಂಡುಬಂದರೆ ನಿಯಮಾನುಸಾರ ದಂಡ ಕಟ್ಟಿಸಿಕೊಂಡು ಅವುಗಳನ್ನು ಸಕ್ರಮಗೊಳಿಸಿ. ಭಾರಿ ಪ್ರಮಾಣದಲ್ಲಿ ಉಲ್ಲಂಘನೆ ಆಗಿದ್ದರೆ ತೆರವುಗೊಳಿಸಿ. ಕಾನೂನು ಪ್ರಕಾರ ಏನಿದೆಯೋ ಅದರಂತೆ ಕ್ರಮ ಕೈಗೊಳ್ಳಿ. ಅನಗತ್ಯ ಸಮಯ ಪೋಲು ಮಾಡಬೇಡಿ’ ಎಂದು ಮುಖ್ಯ ನ್ಯಾಯಮೂರ್ತಿಗಳು ಪಾಲಿಕೆಗೆ ತಾಕೀತು ಮಾಡಿದರು.

*
ಅಕ್ರಮ ಕಟ್ಟಡಗಳ ತೆರವುಗೊಳಿಸುವ ಬಗ್ಗೆ ಬಿಬಿಎಂಪಿ ಒಂದಲ್ಲಾ ಒಂದು ಕಾರಣ ನೀಡಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಬೆಂಗಳೂರು ಮಹಾನಗರದಲ್ಲಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೂರು ವರ್ಷ ಬೇಕೆ?
-ಋತುರಾಜ್‌ ಅವಸ್ಥಿ, ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.