ADVERTISEMENT

ರಸ್ತೆಗುಂಡಿ: ಎರಡು ವಾರಗಳಲ್ಲಿ ವರದಿ ಸಲ್ಲಿಕೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:15 IST
Last Updated 9 ಜುಲೈ 2019, 19:15 IST

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳ ಸ್ಥಿತಿಗತಿ ಹಾಗೂ ಅವುಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳ ಬಗ್ಗೆ ಎರಡು ವಾರಗಳಲ್ಲಿ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ಸೂಚಿಸಿದೆ.

‘ರಸ್ತೆಯಲ್ಲಿನ ತೆರೆದ ಗುಂಡಿಗಳಿಂದ ಜನರು ಸಾವು ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್‌ ಮೆನನ್‌ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಾದ ಮಂಡಿಸಿದ ವಕೀಲ ವಿ.ಶ್ರೀನಿಧಿ, ‘ಬಿಬಿಎಂಪಿ ರಸ್ತೆ ಗುಂಡಿಗಳನ್ನು ಗುರುತಿಸಿ ಮುಚ್ಚುವ ಕೆಲಸವನ್ನು ಸಮರ್ಪಕವಾಗಿಯೇ ಮಾಡುತ್ತಿದೆ. ಆದರೆ, ಬೆಂಗಳೂರು ಜಲಮಂಡಳಿ ಕುಡಿಯುವ ನೀರಿನ ಪೈಪ್ ಅಳವಡಿಕೆ ಮತ್ತು ಒಳಚರಂಡಿ ಕೊಳವೆ ಅಳವಡಿಕೆ, ಮೆಟ್ರೊ ಕಾಮಗಾರಿಯಂತಹ ಕಾರಣಗಳಿಂದಾಗಿ ಗುಂಡಿಗಳಾಗುತ್ತಿವೆ’ ಎಂದರು.

ADVERTISEMENT

ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ‘ರಸ್ತೆಗಳ ಗುಣಮಟ್ಟ ಪರಿಶೀಲನೆಗೆ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್‌ನ (ಎಂಇಎಸ್‌) ಸೂಪರಿಂಟೆಂಡೆಂಟ್ ಎಂಜಿನಿಯರ್ ದಿನೇಶ್ ಅಗರವಾಲ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಆದರೆ, ಪಾಲಿಕೆ ಏನು ಕ್ರಮ ಕೈಗೊಂಡಿದೆ ಎಂಬುದು ಈತನಕ ತಿಳಿದಿಲ್ಲ’ ಎಂದರು.

ಅರ್ಜಿದಾರರ ಪರ ಹಿರಿಯ ವಕೀಲೆ ಅನುರಾಧಾ ಅವರು, ‘ಬಿಬಿಎಂಪಿ ಕಳೆದ ಏಳು ತಿಂಗಳಿನಿಂದ ರಸ್ತೆ ಗುಂಡಿಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸಿಲ್ಲ. ಹೈಕೋರ್ಟ್ ಮುಂದಿರುವ ಡಾ.ಅಂಬೇಡ್ಕರ್ ವೀದಿಯಲ್ಲೇ ಗುಂಡಿಗಳಿವೆ’ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಸ್ತೆ ಗುಂಡಿಗಳಿಂದಾಗಿ ಅಪಘಾತ ಸಂಭವಿಸಿ ತೊಂದರೆಗೆ ಸಿಲುಕಿದವರಿಗೆ ಪರಿಹಾರ ನೀಡಬೇಕಾಗುತ್ತದೆ’ ಎಂದು ಬಿಬಿಎಂಪಿಯನ್ನು ಎಚ್ಚರಿಸಿ, ವಿಚಾರಣೆಯನ್ನು 23ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.