ADVERTISEMENT

ಪ್ರಮೋದ್‌ ಮುತಾಲಿಕ್‌ ವಿರುದ್ಧದ ಎಫ್‌ಐಆರ್ ರದ್ದು

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 19:54 IST
Last Updated 2 ಜುಲೈ 2019, 19:54 IST
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್   

ಬೆಂಗಳೂರು: ಪತ್ರಿಕಾಗೋಷ್ಠಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇರೆಗೆ ಶ್ರೀ ರಾಮಸೇನೆ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ಮಂಗಳೂರು ಪೂರ್ವ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಕುರಿತ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣ ಕುರಿತ ಮಂಗಳೂರು 2ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್ ವಿಚಾರಣೆಯನ್ನೂ ರದ್ದುಪಡಿಸಿ ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ಎಂ.ಅರುಣ್‌ ಶ್ಯಾಮ್‌ ಅವರು ಮಂಡಿಸಿದ್ದ, ‘ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್‌ ಅನುಮತಿ ಇಲ್ಲದೇ ಎಫ್‌ಐಆರ್ ದಾಖಲಿಸಿದ್ದಾರೆ’ ಎಂಬ ವಾದಾಂಶವನ್ನು ನ್ಯಾಯಪೀಠ ಮಾನ್ಯ ಮಾಡಿದೆ.

ADVERTISEMENT

ಪ್ರಕರಣವೇನು?: 2004ರ ನವೆಂಬರ್‌ 6ರಂದು ಮಧ್ಯಾಹ್ನ ಮಂಗಳೂರಿನ ಆರ್ಯ ಸಮಾಜದ ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್‌ ಮುತಾಲಿಕ್‌, ‘ಅತ್ಯಾಚಾರಿಗಳ ಕೈ ಕಡಿಯಿರಿ. ಅವರ ನ್ಯಾಯಾಲಯದ ವೆಚ್ಚವನ್ನು ನಾವು ಭರಿಸುತ್ತೇವೆ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಲಾಗಿತ್ತು.

ಈ ಕುರಿತಂತೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಮಂಗಳೂರು ಪೂರ್ವ ಠಾಣಾ ಪೊಲೀಸರು ಮುತಾಲಿಕ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 505 (1) (ಬಿ) ಅನುಸಾರ 2ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.