ಬೆಂಗಳೂರು: ‘ಜಾಹೀರಾತು ನೀತಿಗೆ ಸಂಬಂಧಿಸಿದ ಉಪ ನಿಯಮಗಳ (ಬೈ–ಲಾ) ಕರಡು ನೀತಿ ಕುರಿತಂತೆ, ಖಾಸಗಿಯಾಗಿ ಆಕ್ಷೇಪಣೆ ಆಲಿಸಲು ಕೋರಿರುವವರ ಅಹವಾಲು ಪ್ರಕ್ರಿಯೆಯನ್ನು ಇನ್ನೊಂದು ವಾರದೊಳಗೆ ಪೂರ್ಣಗೊಳಿಸಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಆದೇಶಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವು ಹಾಗೂ ರಸ್ತೆಗುಂಡಿ ಭರ್ತಿ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಶನಿವಾರ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘2018ರ ಸೆಪ್ಟೆಂಬರ್ 25ರಂದು ಬೈಲಾಗೆ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ನೀಡುವಂತೆ ಕೋರಲಾಗಿದೆ. ಆದರೆ, ಇದನ್ನು ಇನ್ನೂ ಆಖೈರುಗೊಳಿಸಿಲ್ಲ’ ಎಂದು ಆಕ್ಷೇಪಿಸಿದರು.
ಈ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿದ ಅವರು, ‘ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ, ಬಿಬಿಎಂಪಿ ಕಮಿಷನರ್ ಹಾಗೂ ಹಲವು ಅಧಿಕಾರಿಗಳ ತಂಡ ತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆಂದು ವಿದೇಶಕ್ಕೆ ಹೋಗಿದೆ’ ಎಂದರು.
ಈ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್ ಮಾಹೇಶ್ವರಿ, ‘ನೀವು ಪ್ರಕರಣಕ್ಕೆ ಮಾತ್ರವೇ ಸೀಮಿತವಾಗಿ ನಿಮ್ಮ ಆಕ್ಷೇಪಣೆ ಅಥವಾ ವಿವರ ಒದಗಿಸಿ, ಅನ್ಯ ವಿಷಯಗಳ ಗೊಡವೆಗೆ ಹೋಗಬೇಡಿ’ ಎಂದು ಕಿವಿಮಾತು ಹೇಳಿದರು.
‘ಶೀಘ್ರವೇ ಅಹವಾಲು ಆಲಿಕೆಯನ್ನು ಪೂರ್ಣಗೊಳಿಸಿ’ ಎಂದು ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರಿಗೆ ಸೂಚಿಸಿದರು.
ಅರ್ಜಿದಾರರ ಪರ ಹಾಜರಿದ್ದ ಮತ್ತೊಬ್ಬ ವಕೀಲ ರಮೇಶ್ಚಂದ್ರ ಅವರು, ‘ಮೈಸೂರು ರಸ್ತೆಯ ಪಂತರಪಾಳ್ಯ ವ್ಯಾಪ್ತಿಯಲ್ಲಿ ಕಾನೂನಿಗೆ ವಿರುದ್ಧವಾಗಿ ಎರಡು ಕಡೆ ಜಾಹೀರಾತು ಹಾಗೂ ಜಾಹೀರಾತು ಸ್ಟ್ರಕ್ಚರ್ (ಸಂರಚನಾ ಚೌಕಟ್ಟು) ಹಾಕಿರುವುದಕ್ಕೆ ಸಂಬಂಧಿ
ಸಿದಂತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಿಸಿದ್ದ ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಯನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿದೆ’ ಎಂದರು.
ಇದಕ್ಕೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ‘ಇಲ್ಲ ಯಾರನ್ನೂ ವರ್ಗಾವಣೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.
ಈ ಮಾತಿಗೆ ನ್ಯಾಯಮೂರ್ತಿಗಳು, ‘ಇಂತಹ ಗಂಭೀರ ವಿಷಯಗಳನ್ನು ಕೋರ್ಟ್‌ಗೆ ನಿಖರವಾಗಿ ವಿವರಿಸಿ’ ಎಂದು ರಮೇಶ್ಚಂದ್ರ ಅವರಿಗೆ ಸೂಚಿಸಿದರು.
ಜಾಹೀರಾತು ಕಂಪನಿ ಪರ ವಕೀಲ ಬಿ.ವಿ.ಶಂಕರನಾರಾಯಣ ರಾವ್, ‘ಮ್ಯಾಗ್ರತ್ ರಸ್ತೆಯಲ್ಲಿರುವ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿ ಲಿಮಿಟೆಡ್ ಕಂಪನಿ (ಐಟಿಐ) ಮತ್ತು ಶಾಂತಿನಗರದ ಬೆಂಗಳೂರು ಮಹಾನಗರ ಸಾರಿಗೆ ಕಾರ್ಪೋರೇಷನ್ (ಬಿಎಂಟಿಸಿ) ಆವರಣದಲ್ಲಿನ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ’ ಎಂದು ಆಕ್ಷೇಪಿಸಿ ಪ್ರಮಾಣ ಪತ್ರ ಸಲ್ಲಿಸಿದರು.
ವಿಚಾರಣೆಯನ್ನು ಇದೇ 4ಕ್ಕೆ ಮುಂದೂಡಲಾಗಿದೆ.
ಗುಂಡಿ ಭರ್ತಿ ಪೂರ್ಣಗೊಳಿಸಿ: ‘ಈ ಬಾರಿಯ ಕ್ರಿಸ್ಮಸ್ ಹಬ್ಬದ ವೇಳೆಗೆ ಬೆಂಗಳೂರು ನಗರ ಗುಂಡಿಮುಕ್ತ ನಗರವಾಗಿರುವಂತೆ ನೋಡಿಕೊಳ್ಳಿ’ ಎಂದು ನ್ಯಾಯಪೀಠ ಬಿಬಿಎಂಪಿಗೆ ತಾಕೀತು ಮಾಡಿತು.
‘ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಮತ್ತೊಂದು ಪಿಐಎಲ್ ಅನ್ನೂ ನ್ಯಾಯಪೀಠ ಇದೇ ವೇಳೆ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಶ್ರೀನಿಧಿ ಅವರಿಗೆ, ‘ವಾಸ್ತವದಲ್ಲಿ, ರಸ್ತೆ ಗುಂಡಿ ಭರ್ತಿ ಮಾಡಿ ಎಂದು ಯಾರೂ ಹೈಕೋರ್ಟ್‌ಗೆ ಬರದಂತೆ ನೋಡಿಕೊಳ್ಳಬೇಕಾದ್ದು ಬಿಬಿಎಂಪಿ ಅಧಿಕಾರಿಗಳ ಆದ್ಯ ಕರ್ತವ್ಯ. ಗುಂಡಿ ಭರ್ತಿ ಹೊರತಾಗಿ ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬೆಂಗಳೂರಿನ ಸೌಂದರ್ಯ ಮರಳುವ ದಿಸೆಯಲ್ಲಿ ಅತ್ತ ಗಮನ ಕೊಡಿ’ ಎಂದು ತಾಕೀತು ಮಾಡಿದರು.
ಅರ್ಜಿದಾರರ ಪರ ವಕೀಲೆ ಎಸ್.ಆರ್.ಅನೂರಾಧ ಅವರು, ‘ಬಿಬಿಎಂಪಿ ನಡೆಸುತ್ತಿರುವ ರಸ್ತೆ ಗುಂಡಿ ಭರ್ತಿ ಗುಣಮಟ್ಟದಿಂದ ಕೂಡಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹೈಕೋರ್ಟ್ ಪ್ರವೇಶಿಸುವ ಗೇಟ್ ಬಳಿ ಭರ್ತಿ ಮಾಡಲಾಗಿರುವ ಗುಂಡಿಯೇ ಸಾಕ್ಷಿ’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀನಿಧಿ, ‘ನಾವು ಶಕ್ತಿಮೀರಿ ಗುಂಡಿ ಭರ್ತಿಗೆ ಶ್ರಮಿಸುತ್ತಿದ್ದೇವೆ. ಈ ಮಾತನ್ನು ಅತ್ಯಂತ ಆತ್ಮವಿಶ್ವಾಸದಿಂದ ದೃಢವಾಗಿ ಹೇಳುತ್ತಿದ್ದೇನೆ. ನಮ್ಮ ಕೆಲಸದಲ್ಲಿ ಇನಿತೂ ಲೋಪವಿಲ್ಲ’ ಎಂದು ಸಮರ್ಥಿಸಿಕೊಂಡರು.
ಈ ಮಾತನ್ನು ಪುಷ್ಟೀಕರಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ‘ಮೊದಲಿನ ಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ಬದಲಾವಣೆ ಕಂಡುಬಂದಿದೆ’ ಎಂದರು.
‘ಮುಂದಿನ ಹತ್ತು ದಿನಗಳ ಒಳಗೆ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಳ್ಳಬೇಕು’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಗೆ ತರಾಟೆ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲ ಗುರುರಾಜ ಜೋಷಿ ಅವರು, ಫ್ಲೆಕ್ಸ್‌ಗಳಿಗೆ ಬಳಸಲಾಗುವ ವಸ್ತುಗಳು ಜೈವಿಕ ಪ್ರತ್ಯೇಕತೆ ಗುಣ ಹೊಂದಿವೆಯೊ ಇಲ್ಲವೋ ಎಂಬ ಬಗ್ಗೆ ಸ್ಯಾಂಪಲ್‌ಗಳ ಪರೀಕ್ಷೆ ನಡೆಸಿರುವ ಚೆನ್ನೈನ ಸಿಪೆಟ್ (ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ) ಮಧ್ಯಂತರ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ವರದಿ ವಿಳಂಬಕ್ಕೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು, ಮಂಡಳಿ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ‘ನೀವು ಹೈಕೋರ್ಟ್ ಜೊತೆ ವ್ಯಹರಿಸುತ್ತಿದ್ದೀರಿ ಎಂಬುದನ್ನು ಮರೆಯಬೇಡಿ’ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸಭೆಗೆ ಹಾಜರಾಗಲು ಸೂಚನೆ
‘ಗುಂಡಿ ಮುಚ್ಚುವ ಸಂಬಂಧ ಸಲಹೆಗಳನ್ನು ನೀಡುವ ದಿಸೆಯಲ್ಲಿ ಕೋರ್ಟ್ ನೇಮಕ ಮಾಡಿರುವ ಆಯೋಗದ ಸದಸ್ಯರೂ ಆದ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್ ಎಂಜಿನಿಯರ್ ದಿನೇಶ್ ಅಗರ್‌ವಾಲ್ ಅವರು, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿವಿಧ ಇಲಾಖೆಗಳ ಸಮನ್ವಯ ಸಭೆಗೆ ಹಾಜರಾಗಬೇಕು’ ಎಂದು ನ್ಯಾಯಪೀಠ ಸೂಚಿಸಿತು.
‘ಗುಂಡಿ ಭರ್ತಿಗೆ ಸಂಬಂಧಿಸಿದಂತೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸಭೆಗೆ ಸೂಕ್ತ ಸಲಹೆಗಳನ್ನು ನೀಡಬೇಕು’ಎಂದು ಹೇಳಿತು.
*
ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅಧಿಕಾರಿಗಳ ಒಂದೇ ಒಂದು ಸಣ್ಣ ತಪ್ಪನ್ನೂ ಕೋರ್ಟ್ ಸಹಿಸುವುದಿಲ್ಲ.
-ದಿನೇಶ್ ಮಾಹೇಶ್ವರಿ, ಮುಖ್ಯ ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.