ADVERTISEMENT

21 ವರ್ಷಗಳ ಅಗಲಿಕೆಗೆ ವಿಚ್ಛೇದನದ ಮುದ್ರೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 16:53 IST
Last Updated 18 ಜನವರಿ 2022, 16:53 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ’ಕಳೆದ 21 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ದಂಪತಿ ನಡುವೆ ವಿವಾಹ ಸಂಪೂರ್ಣ ಮುರಿದು ಬಿದ್ದಿದೆ. ಇಂತಹ ಸಂಬಂಧವನ್ನು ಒಗ್ಗೂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ‘ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತಿಯ ಮನವಿಯಂತೆ ವಿಚ್ಚೇದನಕ್ಕೆ ಆದೇಶಿಸಿದ್ದು, ಪತಿ ತನ್ನ ವಿಚ್ಛೇದಿತ ಪತ್ನಿಗೆ ನಾಲ್ಕು ತಿಂಗಳಲ್ಲಿ ₹ 30 ಲಕ್ಷ ಜೀವನಾಂಶ ನೀಡಬೇಕು ಎಂದು ನಿರ್ದೇಶಿಸಿದೆ.

ಈ ಕುರಿತಂತೆ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ.

’ಪತ್ನಿ ಕಾರಣ ನೀಡದೆ ತವರಿಗೆ ಹೋಗಿದ್ದಾಳೆ. ಪತ್ನಿಯನ್ನು ವಾಪಸು ಕಳುಹಿಸಿಕೊಡುವಂತೆ ಮಾವನ ಮನೆಗೆ ತೆರಳಿ ಕೋರಿದ್ದರೂ ಆಕೆ ಬರಲು ಒಪ್ಪಿಲ್ಲ. ಈ ದಿಸೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಹೋಗಿ ಕೇಳಿಕೊಂಡರೂ ವಾಪಸು ಬಂದಿಲ್ಲ. ಆದ್ದರಿಂದ, ಸಹಜೀವನ ಮುಂದುವರೆಸಲು ಒಪ್ಪದ ಪತ್ನಿಯಿಂದ ವಿಚ್ಛೇದನ ಕೊಡಿಸಬೇಕು‘ ಎಂದು ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ADVERTISEMENT

’ದಂಪತಿಗೆ ಈಗಾಗಲೇ 56 ವರ್ಷವಾಗಿದೆ. ಸತತ 21 ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ದಂಪತಿಯಲ್ಲಿ ಯಾರೊಬ್ಬರೂ ತಮ್ಮ ವೈವಾಹಿಕ ಹಕ್ಕುಗಳ ಪುನರ್‌ ಸ್ಥಾಪನೆಗೆ ಪ್ರಯತ್ನಿಸಿಲ್ಲ. ವಿಚ್ಛೇದನ ಬೇಡ ಎನ್ನುತ್ತಿರುವ ಪತ್ನಿ ಕೂಡ ತಮ್ಮ ವೈವಾಹಿಕ ಹಕ್ಕುಗಳನ್ನು ಪುನರ್‌ ಸ್ಥಾಪಿಸಲು ಕೋರಿ ಅರ್ಜಿ ಸಲ್ಲಿಸಿಲ್ಲ‘ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.