ADVERTISEMENT

ಅಮೃತಾನಂದಮಯಿ ಟ್ರಸ್ಟ್‌ಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 19:59 IST
Last Updated 23 ಆಗಸ್ಟ್ 2019, 19:59 IST

ಬೆಂಗಳೂರು: ‘ಸಾಮಾಜಿಕ ಸೇವಾ ಉದ್ದೇಶಕ್ಕಾಗಿ ಸರ್ಕಾರದಿಂದ ಪಡೆದ 22 ಎಕರೆ ಜಮೀನಿನಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಹಣ ಗಳಿಸಲಾಗುತ್ತಿದೆ’ ಎಂದು ಆಕ್ಷೇಪಿಸಲಾದ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಮಾತಾ ಅಮೃತಾನಂದಮಯಿ ಟ್ರಸ್ಟ್‌ಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ವರ್ತೂರು ಹೋಬಳಿ ಕಸವನಹಳ್ಳಿಯ ಬೋವಿ ಕಾಲೋನಿ ನಿವಾಸಿಗಳಾದ ಕವಿತಾ ಸೇರಿದಂತೆ ಐವರು ಸಲ್ಲಿಸಿ
ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಬೆಂಗಳೂರು ನಗರ ಶಾಖೆಯ ಮಾತಾ ಅಮೃತಾನಂದಮಯಿ ಟ್ರಸ್ಟ್, ಕಂದಾಯ ಇಲಾಖೆ, ನಗರ ಜಿಲ್ಲಾಧಿಕಾರಿ,ವಿಶೇಷ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಕೆ.ಆರ್‌.ಪುರಂ ಪೂರ್ವ ತಾಲೂಕು ತಹಶೀಲ್ದಾರ್‌ ಅವರಿಗೂ ನೋಟಿಸ್ ಜಾರಿಗೆ ಆದೇಶಿಸಲಾಗಿದೆ.

ADVERTISEMENT

ಆಕ್ಷೇಪಣೆ ಏನು?: ‘ಬಡ ವಿಧವೆಯರಿಗೆ 2 ಸಾವಿರ ಉಚಿತ ಮನೆ ಕಟ್ಟಲು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೇವಸ್ಥಾನ, ಬ್ರಹ್ಮಸ್ಥಾನ, ಆಶ್ರಮ, ಅನಾಥ ಮಕ್ಕಳಿಗೆ ಶಾಲೆ, ಉಚಿತ ವೈದ್ಯಕೀಯ ಕೇಂದ್ರ ಸ್ಥಾಪಿಸುವುದಾಗಿ ಮಾತಾ ಅಮೃತಾನಂದಮಯಿ ಟ್ರಸ್ಟ್‌ ಸರ್ಕಾರದಿಂದ 22 ಎಕರೆ ಜಮೀನು ಪಡೆದಿದೆ. ಆದರೆ, ಈ ಜಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಷರತ್ತುಗಳನ್ನು ಉಲ್ಲಂಘಿಸಿದೆ. ಟ್ರಸ್ಟ್‌ ಹಣ ಗಳಿಕೆಯಲ್ಲಿ ತೊಡಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.