ADVERTISEMENT

ಅಕಾಡೆಮಿ ಅಧ್ಯಕ್ಷರ ನೇಮಕ ರದ್ದು: ತುರ್ತು ನೋಟಿಸ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 20:01 IST
Last Updated 9 ಸೆಪ್ಟೆಂಬರ್ 2019, 20:01 IST
   

ಬೆಂಗಳೂರು: ‘ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಮತ್ತು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದ ಆದೇಶವನ್ನು ಹಿಂಪಡೆದಿರುವ ಕ್ರಮ ಕಾನೂನು ಬಾಹಿರ’ ಎಂದು ಆಕ್ಷೇಪಿಸಲಾಗಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಜೆ.ಲೋಕೇಶ್‌ ಮತ್ತು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಪೆಮ್ಮಂಡ ಕೆ.ಪೊನ್ನಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರು ಮತ್ತು ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಅವರಿಗೂ ತುರ್ತು ನೋಟಿಸ್‌ ಜಾರಿಗೆ ಆದೇಶಿಸಿದ ನ್ಯಾಯಪೀಠ, ಈ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಲಾಗಿದೆ.

ADVERTISEMENT

ಆಕ್ಷೇಪಣೆ ಏನು?: ‘ನೇಮಕಾತಿ ರದ್ದುಗೊಳಿಸಿ 2019ರ ಜುಲೈ 31ರಂದು ಹೊರಡಿಸಿರುವ ಸರ್ಕಾರದ ಆದೇಶ ನೇಮಕಾತಿ ಷರತ್ತುಗಳಿಗೆ ವಿರುದ್ಧವಾಗಿದೆ. ಇದರಲ್ಲಿ ಅಕಾಡೆಮಿ ಅಥವಾ ಸಾರ್ವಜನಿಕರ ಹಿತಾಸಕ್ತಿ ಅಡಗಿಲ್ಲ. ಅಂತೆಯೇ ಈತನಕ ಹೊಸ ಅಧ್ಯಕ್ಷರ ನೇಮಕಾತಿ ನಡೆದಿಲ್ಲ. ಸರ್ಕಾರ ತನ್ನಿಷ್ಟಕ್ಕೆ ತಕ್ಕಂತೆ ನೇಮಕಾತಿ ರದ್ದು
ಗೊಳಿಸಿರುವುದು ಏಕಪಕ್ಷೀಯವಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.