ADVERTISEMENT

58ಕ್ಕೆ ನಿವೃತ್ತಿ: ಕೆಎಸ್‌ಸಿಎಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 20:38 IST
Last Updated 10 ನವೆಂಬರ್ 2022, 20:38 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ರಾಜ್ಯ ಸರ್ಕಾರವು ನಿವೃತ್ತಿ ವಯಸ್ಸನ್ನು 60ಕ್ಕೆ ಹೆಚ್ಚಿಸಿ ದ್ದರೂ 58ನೇ ವಯಸ್ಸಿನಲ್ಲೇ ತನ್ನ ನೌಕರರೊಬ್ಬರನ್ನು ನಿವೃತ್ತಿಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಕೆಎಸ್‌ಸಿಎ ನಿವೃತ್ತ ನೌಕರ ಜೆ.ರಾಜಕುಮಾರ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ
ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಕಾರ್ಮಿಕ ಇಲಾಖೆ ಹಾಗೂ ಕೆಎಸ್‌ಸಿಎಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.

ADVERTISEMENT

58 ವರ್ಷ ತುಂಬಿದೆ ಎಂಬ ಕಾರಣಕ್ಕೆ ರಾಜಕುಮಾರ್ ಅವರಿಗೆ ಕೆಎಸ್‌ಸಿಎ 2022ರ ಮಾರ್ಚ್ 13ರಂದು ಪತ್ರ ಬರೆದು ತಿಳಿಸಿತ್ತು.

ಈ ಪತ್ರದ ಬಗ್ಗೆ ಅರ್ಜಿದಾರರು, ‘ನನ್ನ ನಿವೃತ್ತಿಯ ಆದೇಶ ಪತ್ರವನ್ನು ಮರುಪರಿಶೀಲನೆ ಮಾಡಬೇಕು’ ಎಂದು ಕೋರಿ 2022ರ ಜುಲೈ 11ರಂದು ಕೆಎಸ್‌ಸಿಎಗೆ ಪತ್ರ ಬರೆದಿದ್ದರು.

ಅರ್ಜಿಯಲ್ಲಿ ಏನಿದೆ?: ‘ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಕರ್ನಾಟಕ ಕೈಗಾರಿಕಾ ಸ್ಥಾಪನೆ ನಿಯಮಗಳು-1961ರ ವೇಳಾಪಟ್ಟಿ-1 ಅನ್ನು ತಿದ್ದುಪಡಿ ಮಾಡಿ ರಾಜ್ಯ ಸರ್ಕಾರವು 2017ರ ಮಾರ್ಚ್ 27ರಂದು ಅಧಿಸೂಚನೆ ಹೊರಡಿಸಿದೆ. ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿವೃತ್ತಿಯ ವಯಸ್ಸು 60 ವರ್ಷಗಳಾಗಿರಬೇಕು ಎಂದು ಈ ಹಿಂದಿನ ಹಲವು ಪ್ರಕರಣಗಳಲ್ಲಿ ಹೈಕೋರ್ಟ್ ಕೂಡ ತೀರ್ಪು ನೀಡಿದೆ’ ಎಂಬ ಅಂಶಗಳನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.