ADVERTISEMENT

ದೋಷಾರೋಪ ಪಟ್ಟಿ ಸಲ್ಲಿಕೆ ನಂತರವೂ ಬಂಧನ ಸಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:46 IST
Last Updated 11 ಜುಲೈ 2024, 16:46 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರವೂ ಆರೋಪಿಯನ್ನು ಬಂಧನದಲ್ಲಿ ಇರಿಸಿ ವಿಚಾರಣೆ ಮುಂದುವರಿಸಿದರೆ ಅದು ವಿಚಾರಣಾ ಪೂರ್ವ ಶಿಕ್ಷೆ ಎನಿಸಿಕೊಳ್ಳುತ್ತದೆ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ.

ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಎಂ.ಬಿ.ಸಂತೋಷ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ADVERTISEMENT

ಅಂತೆಯೇ, ಆರೋಪಿ ಪರ ವಕೀಲರಾದ ಚಿಕ್ಕಮಗಳೂರಿನ ಪಿ.ಇ.ಸುರೇಶ್ ಮಂಡಿಸಿದ ವಾದ ಮನ್ನಿಸಿರುವ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?: "ಮೂಡಿಗೆರೆ ತಾಲ್ಲೂಕು ಬಣಕಲ್ ಗ್ರಾಮದಲ್ಲಿದ್ದ ಸಂತೋಷ್‌ರವರ ಕೃಷಿ ಜಮೀನನ್ನು ಕಾರ್ತೀಕ್ (45) ಮಧ್ಯವರ್ತಿಯಾಗಿ ಮಾರಾಟ ಮಾಡಿಸಿದ್ದರು. ಮಾರಾಟದ ನಂತರ ತನಗೆ ಬರಬೇಕಾದ ಲಾಭದ ಹಣಕ್ಕೆ ಕಾರ್ತಿಕ್ ಮೋಸ ಮಾಡಿದ್ದಾರೆ ಎಂದು ಸಂತೋಷ್ ತಗಾದೆ ತೆಗೆದಿದ್ದರು‌‌. ಈ ಸಂಬಂಧ 2023ರ ಆಗಸ್ಟ್ 13ರಂದು ತಮ್ಮ ಮನೆಯಲ್ಲಿ ಕಾರ್ತಿಕ್ ಜೊತೆ ಮಾತುಕತೆ ನಡೆಸುತ್ತಿದ್ದ ಸಮಯದಲ್ಲಿ ಕಾರ್ತಿಕ್ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಸಂತೋಷ್ ಅವರ ತಂದೆ ಭಾಸ್ಕರ ಗೌಡ (68) ಇದನ್ನು ತಡೆಯಲು ಮುಂದಾದಾಗ ಅವರ ಮೇಲೂ ಹಾಗೂ ಅವರ ತಾಯಿ ಪ್ರೇಮಾ ಅವರ
ಮೇಲೂ ಹಲ್ಲೆ ನಡೆಸಿದ್ದಾರೆ. ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟರೆ ಭಾಸ್ಕರಗೌಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಅವರೂ ಮೃತಪಟ್ಟಿದ್ದರು. ಈ ಸಂಬಂಧ ಕಾರ್ತಿಕ್ ಪತ್ನಿ ಶಾಂಭವಿ (42) ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು" ಎಂದು ದೋಷಾರೋಪಣ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಂತೋಷ್ ಅವರನ್ನು ಬಂಧಿಸಿದ್ದರು. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಕಲಂ 302 ಮತ್ತು 307ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಚಿಕ್ಕಮಗಳೂರು ಎರಡನೇ ಹೆಚ್ಚುವರಿ ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ಸೆಷನ್ಸ್ ನ್ಯಾಯಾಲಯ ಸಂತೋಷ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.