ADVERTISEMENT

ವಿಚಾರಣಾ ಕೋರ್ಟ್‌ಗೆ ಎಲ್ಒಸಿ ಹೊರಡಿಸುವ ಅಧಿಕಾರವಿಲ್ಲ: ಹೈಕೋರ್ಟ್

ಕಲಂ 125ರ ಜೀವನಾಂಶ ಕೋರಿಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 23:22 IST
Last Updated 15 ನವೆಂಬರ್ 2025, 23:22 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಜೀವನಾಂಶ ನೀಡಬೇಕೆಂಬ ಆದೇಶ ಪಾಲನೆ ಮಾಡದ ಪತಿಯ ವಿರುದ್ಧ ಮಂಗಳೂರಿನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಲುಕ್‌ ಔಟ್‌ ಸರ್ಕ್ಯುಲರ್‌ (ಎಲ್ಒಸಿ) ರದ್ದುಗೊಳಿಸಿರುವ ಹೈಕೋರ್ಟ್, ‘ಕೌಟುಂಬಿಕ ನ್ಯಾಯಾಲಯಕ್ಕೆ ಈ ರೀತಿಯ ಎಲ್ಒಸಿ ಹೊರಡಿಸುವಂತಹ ಯಾವುದೇ ಅಧಿಕಾರ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

ಮಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ‌ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಕುವೈತ್ ನಲ್ಲಿರುವ ಪತಿ (53) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ₹2 ಲಕ್ಷ ಠೇವಣಿ ಇರಿಸಬೇಕು’ ಎಂಬ ಷರತ್ತು ವಿಧಿಸಿರುವ ನ್ಯಾಯಪೀಠ,’ ಎಲ್‌ಒಸಿ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿದೆ.

ADVERTISEMENT

‘ಯಾವುದೇ ಪ್ರಕರಣಗಳಲ್ಲಿ ನ್ಯಾಯಾಲಯ ಎಲ್‌ಒಸಿ ರದ್ದುಗೊಳಿಸಿದರೆ ಅಂತಹ ಸಂದರ್ಭಗಳಲ್ಲಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಅದರ ಬಗ್ಗೆ ಬ್ಯೂರೊ ಆಫ್‌ ಇಮಿಗ್ರೇಷನ್‌ಗೆ ಮಾಹಿತಿ ನೀಡಬೇಕು ಮತ್ತು ಯಾವ ಅಧಿಕಾರಿ ಎಲ್‌ಒಸಿ ಜಾರಿಗೊಳಿಸುತ್ತಾರೋ ಅಂತಹವರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು’ ಎಂದು ನ್ಯಾಯಪೀಠ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ತಾಕೀತು ಮಾಡಿದೆ.

‘ಒಂದು ವೇಳೆ ಆ ಅಧಿಕಾರಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದೇ ಇದ್ದರೆ ಅಂತಹ ಅಧಿಕಾರಿಯ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಬೇಕು’ ಎಂದೂ ಅದೇಶಿಸಿದೆ.

‘ದಂಡ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 125ರಡಿ ಕೌಟುಂಬಿಕ ನ್ಯಾಯಾಲಯಕ್ಕೆ ಎಲ್‌ಒಸಿ ಹೊರಡಿಸಿರುವ ಯಾವುದೇ ಅಧಿಕಾರವಿಲ್ಲ. ಜೀವನಾಂಶ ನೀಡುವ ಕುರಿತಾದ ಕಲಂ 125 ಅನ್ನು ನ್ಯಾಯಾಲಯ ಇತರೆ ಆದೇಶಗಳ ಮೂಲಕ ಜಾರಿಗೊಳಿಸಬಹುದು. ಒಂದು ವೇಳೆ ಪತಿ ಜೀವನಾಂಶ ನೀಡಲು ವಿಫಲವಾದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಬಂಧನಕ್ಕೆ ಆದೇಶ ಹೊರಡಿಸಬಹುದು. ಆದರೆ, ಜೀವನಾಂಶ ವಸೂಲು ಮಾಡುವುದಕ್ಕಾಗಿ ಎಲ್ಒಸಿ ಹೊರಡಿಸಲು ಆಗದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಸಿಆರ್‌ಪಿಸಿ ಕಲಂ 125ರ ಆದೇಶಗಳನ್ನು ಜಾರಿ ಮಾಡುವಾಗ ಈ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಸೂಕ್ತ ಸುತ್ತೋಲೆ ಹೊರಡಿಸಬೇಕು’ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.