ADVERTISEMENT

ಬಿಬಿಎಂಪಿ ವಿಚಾರದಲ್ಲಿ ಎನ್ ಆರ್ ರಮೇಶ್‌ಗೆ ಹೈಕೋರ್ಟ್‌ನಲ್ಲಿ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 20:51 IST
Last Updated 12 ಫೆಬ್ರುವರಿ 2022, 20:51 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದುರಾಲೋಚನೆಯಿಂದ ದೂರು ಸಲ್ಲಿಸುವ ಪ್ರವೃತ್ತಿ ಹೊಂದಿರುವ ಬಿಜೆಪಿಯ ಬೆಂಗಳೂರು ಜಿಲ್ಲೆ ದಕ್ಷಿಣ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರ ದುರುದ್ದೇಶಪೂರಿತ ನಡೆ ಪರಿಶೀಲಿಸಬೇಕು ಮತ್ತು ಅಧಿಕಾರಿಯೊಬ್ಬರ ವಿರುದ್ಧ ಸಲ್ಲಿಸಿರುವ ದೂರು ವಜಾಗೊಳಿಸಬೇಕು’ ಎಂದು ಕೋರಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವೈ.ಎಂ.ರಾಜು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ರಾಜು ವಿರುದ್ದ ಭ್ರಷ್ಟಾಚಾರ ನಿಗ್ರಹ ದಳ ನಡೆಸುತ್ತಿರುವ ತನಿಖೆಗೆ ಮಧ್ಯಂತರ ತಡೆ ನೀಡಿರುವ ನ್ಯಾಯಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಎಂಜಿನಿಯರ್, ಬಿಬಿಎಂಪಿ ತಾಂತ್ರಿಕ ವಿಚಕ್ಷಣಾ ವಿಭಾಗದ ಮುಖ್ಯಸ್ಥರು, ಎಸಿಬಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಡಿಎಸ್ಪಿ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ADVERTISEMENT

ಅರ್ಜಿಯಲ್ಲಿ ಏನಿದೆ?: ‘ವೈ.ಎಂ.ರಾಜು ಅವರು ಗಾಂಧಿನಗರ ಉಪವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾಗ ಕೆಲವು ಅಭಿವೃದ್ಧಿ ಯೋಜನೆ ಕಾಮಗಾರಿ ನಿರ್ವಹಣೆ ಮಾಡಿದ್ದರು. ಈ ಕಾಮಗಾರಿಗಳು ಕಳಪೆಯಾಗಿದೆ ಮತ್ತು ಇವುಗಳಿಗೆ ಒದಗಿಸಲಾದ ಅನುದಾನ ದುರ್ಬಳಕೆಯಾಗಿದೆ’ ಎಂದು ಆರೋಪಿಸಿ ಎನ್.ಆರ್.ರಮೇಶ್ ಅವರು ರಾಜು ವಿರುದ್ಧ ಏಕಕಾಲಕ್ಕೆ ಹಲವು ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಿದ್ದರು.

‘ರಾಜು ಅವರು ಕಾಮಗಾರಿ ನಿರ್ವಹಣೆ ಮಾಡಿದ್ದು 2015-16ರಲ್ಲಿ. ಆದರೆ, ರಮೇಶ್ ದೂರು ಸಲ್ಲಿಸಿ ತನಿಖೆಗೆ ಕೋರಿರುವುದು 2021ರ ನವೆಂಬರ್‌ನಲ್ಲಿ. ಆರು ವರ್ಷಗಳ ನಂತರ ಈ ರೀತಿ ದೂರು ನೀಡಿರುವ ರಮೇಶ್ ಅವರ ವರ್ತನೆ ಅಧಿಕಾರಿಗಳನ್ನು ಶೋಷಣೆ ಮಾಡುವುದೇ ಆಗಿದೆ. ಅವರು, ಈ ರೀತಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದುರುದ್ದೇಶದಿಂದ ದೂರು ಸಲ್ಲಿಸುವ ಪ್ರವೃತ್ತಿ ಹೊಂದಿದ್ದಾರೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ಏಕಕಾಲಕ್ಕೆ ಒಂದೇ ವಿಷಯದ ಬಗ್ಗೆ ಹಲವು ತನಿಖಾ ಸಂಸ್ಥೆಗಳಿಗೆದೂರು ನೀಡಿರುವುದು, ಕೇವಲ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಹೆದರಿಸುವ ಏಕೈಕ ಉದ್ದೇಶ ಹೊಂದಿದೆ. ರಮೇಶ್ ಅವರಿಗೆ ಈ ರೀತಿ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸಾರ್ವಜನಿಕ ಸೇವಕರ ವಿರುದ್ಧ ದೂರು ನೀಡುವುದು ಅಭ್ಯಾಸವಾಗಿದೆ. ಆದ್ದರಿಂದ, ರಮೇಶ್ ಅವರ ಈ ಪ್ರವೃತ್ತಿಯ ಬಗ್ಗೆ ಕೋರ್ಟ್
ಪ‍ರಾಮರ್ಶಿಸಿ ಸೂಕ್ತ ಕ್ರಮಕ್ಕೆ ಅದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.