ADVERTISEMENT

ಬಿಡಿಎ, ಬಿಬಿಎಂಪಿ ಆಯುಕ್ತರ ಹಾಜರಿಗೆ ಹೈಕೋರ್ಟ್‌ ಆದೇಶ

ಆರ್ಥಿಕ ದುರ್ಬಲರಿಗೆ ವಸತಿ ಸಮುಚ್ಚಯ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 22:02 IST
Last Updated 4 ಜನವರಿ 2023, 22:02 IST
   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೋರಮಂಗಲದ ಈಜಿಪುರದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಿತರಿಸಬೇಕಾದ ಉದ್ದೇಶಿತ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ವಿಳಂಬದ ಬಗ್ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ‘ಕರ್ನಾಟಕ ಈಜಿಪುರ ನಿವಾಸಿಗಳ ಸಾಮಾಜಿಕ ಕಲ್ಯಾಣ ಸಂಘ‘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃಥ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ADVERTISEMENT

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ‘ಕಾಮಗಾರಿಯಲ್ಲಿ ಕಿಂಚಿತ್ತೂ ಪ್ರಗತಿಯಾಗಿಲ್ಲ. ಇದರ ಹೊಣೆ ಹೊರಬೇಕಾದ ಸಂಸ್ಥೆಗಳು ಪರಸ್ಪರ ಹೊಣೆಯನ್ನು ವರ್ಗಾಯಿಸುತ್ತಾ ಆರೋಪ–ಪ್ರತ್ಯಾರೋಪ ಮಾಡುತ್ತಿರುವುದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿತು.

‘ಕಾಮಗಾರಿಯಲ್ಲಿ ಏನಾದರೂ ಪ್ರಗತಿ ಆಗಿದೆಯೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಲು ನ್ಯಾಯಾಲಯ ಬಯ
ಸುತ್ತದೆ. ಆದ್ದರಿಂದ, ಬಿಬಿಎಂಪಿ, ಬಿಡಿಎ ಮುಖ್ಯಸ್ಥರು ಮತ್ತು ಗುತ್ತಿಗೆದಾರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಇದೇ 5ರಂದು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡಬೇಕು‘ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಎಚ್ಚರಿಕೆ: ‘ಕಾಮಗಾರಿ ವಿಳಂಬಕ್ಕೆ ಕಾರಣವಾದ ಗುತ್ತಿಗೆದಾರಾದ ಮೆವರಿಕ್ ಹೋಲ್ಡಿಂಗ್ ಕಂಪನಿಯನ್ನು ನ್ಯಾಯ
ಪೀಠವು ಕಳೆದ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್‌ ಆದೇಶ ನೀಡಿ ದಶಕವೇ ಕಳೆದರೂ ಕಾಮಗಾರಿ ಅನುಷ್ಠಾನಗೊಂಡಿಲ್ಲ ಎಂದು ಹರಿಹಾಯ್ದಿತ್ತು. ಇದೇ ಪರಿಸ್ಥಿತಿ ಮುಂದುವರೆದರೆ, ಕಾಮಗಾರಿ ಪೂರ್ಣಗೊಳ್ಳುವವರೆಗೆ ಅರ್ಜಿದಾರರಿಗೆ ಬಾಡಿಗೆ ಹಣ ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿತ್ತು.

‘ನಕ್ಷೆ ಅನುಮೋದನೆಯಾದ 18 ತಿಂಗಳೊಳಗೆ ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಇದಕ್ಕಾಗಿ ಕಾಮಗಾರಿಯ ಗುತ್ತಿಗೆ ಪಡೆದ ಮೇವರಿಕ್ ಹೋರ್ಡಿಂಗ್ಸ್ ಪ್ರೈವೇಟ್
ಲಿಮಿಟೆಡ್‌ ಕಂಪನಿ ಮುಚ್ಚಳಿಕೆ ಬರೆದುಕೊಡಬೇಕು’ ಎಂದು ಹೈಕೋರ್ಟ್‌ 2017ರ ಮೇ31ರಂದು ಆದೇಶಿಸಿತ್ತು. ಅದರಂತೆ ಕಾಮಗಾರಿ ಆರಂಭಗೊಂಡರೂ ಈ ತನಕ ಪೂರ್ಣಗೊಂಡಿಲ್ಲ. ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 1,512 ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.