ADVERTISEMENT

ಪತ್ರ ಬರೆದು ಉಭಯ ಕುಶಲೋಪರಿ ನಡೆಸುತ್ತಿದ್ದೀರಾ?: ಬಿಬಿಎಂಪಿಗೆ ಹೈಕೋರ್ಟ್‌ ಚಾಟಿ

ಕೆರೆ ಒತ್ತುವರಿ ತೆರವು; ಪಾಲಿಕೆ ಕಾರ್ಯವೈಖರಿಗೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 5:49 IST
Last Updated 16 ಜುಲೈ 2022, 5:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮತ್ತೊಬ್ಬ ಅಧಿಕಾರಿಗೆ ಪತ್ರ ಬರೆದು ಉಭಯ ಕುಶಲೋಪರಿ ವಿಚಾರಿಸಿದ ಮಾತ್ರಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳ ಒತ್ತುವರಿ ತೆರವು ಮಾಡಿದಂತಾಗುತ್ತದೆಯೇ’ ಎಂದು ಹೈಕೋರ್ಟ್‌, ಬಿಬಿಎಂಪಿ ಕಾರ್ಯವೈಖರಿಗೆ ವ್ಯಂಗ್ಯವಾಡಿದೆ.

ಕೆರೆಗಳ ಒತ್ತುವರಿ ತೆರವು ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ 2014ರಿಂದ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಸುಬ್ರಹ್ಮಣ್ಯಪುರ ಕೆರೆ ಪ್ರದೇಶದ 3.39 ಎಕರೆ ಪ್ರದೇಶದಲ್ಲಿ ಕೊಳೆಗೇರಿ ನಿವಾಸಿಗಳಿದ್ದು, ಅವರನ್ನು ತೆರವುಗೊಳಿಸುವುದು ಕೊಳೆಗೇರಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದೆ. ಅವರಿಗೆ ಈ ವಿಚಾರ ತಿಳಿಸಲಾಗಿದೆ. ಅದೇ ರೀತಿ ಬೇಗೂರು ಕೆರೆ ಒತ್ತುವರಿ ತೆರವು ಬಗ್ಗೆಯೂ ಸಂಬಂಧಿಸಿದ ತಹಶೀಲ್ದಾರ್‌ಗೆ ಬಿಬಿಎಂಪಿ ಅಧಿಕಾರಿಗಳು ಪತ್ರ ಬರೆದಿದ್ದಾರೆ’ ಎಂದರು.

ADVERTISEMENT

ಈ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ,‘ಕೋರ್ಟ್ ಆದೇಶ ಪಾಲನೆ ಮಾಡುವುದು ಎಂದರೆ ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಪತ್ರ ಬರೆಯುವುದಾ’ ಎಂದು ಪ್ರಶ್ನಿಸಿತು.

‘ಒತ್ತುವರಿ ತೆರವುಗೊಳಿಸಲು ನಿಮಗೆ ನಿರ್ದೇಶನ ನೀಡಲಾಗಿತ್ತು. ಆದರೆ, ಈಗ ಬಂದು ಒತ್ತುವರಿ ತೆರವು ನಮಗೆ ಸಂಬಂಧಿಸಿದ್ದಲ್ಲ. ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳುತ್ತಿದ್ದೀರಿ. ಅಧಿಕಾರಿಗಳು ಕಚೇರಿಗಳಲ್ಲಿ ಕೂತು ಐಷಾರಾಮಿ ಜೀವನ ನಡೆಸುತ್ತಿದ್ದರೆ, ನೀವು ನ್ಯಾಯಾಲಯದಲ್ಲಿ ಅಂತಹ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಾ’ ಎಂದು ತರಾಟೆಗೆ ತೆಗೆದುಕೊಂಡಿತು.

‘ಈತನಕ ಕೋರ್ಟ್‌ಗೆ ನೀವು ಕೊಟ್ಟಿರುವ ನೆರವು ಸಾಕು. ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದು ನಮಗೆ ಗೊತ್ತಿದೆ’ ಎಂದು ಚಾಟಿ ಬೀಸಿದ ನ್ಯಾಯಪೀಠ, ‘ಮುಂದಿನ ವಿಚಾರಣೆಗೆ ಬಿಬಿಎಂಪಿ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳು ಖುದ್ದು ಹಾಜರಿರಬೇಕು’ ಎಂದು ತಾಕೀತು ಮಾಡಿತು.

ಜೆಪಿ ನಗರದ ಪುಟ್ಟೇನಹಳ್ಳಿ ಕೆರೆ ಒತ್ತುವರಿ ತೆರವಿಗೆ ಕೈಗೊಳ್ಳುವ ಕುರಿತಂತೆ ಬೊಮ್ಮನಹಳ್ಳಿ ಉಪ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೂಡಾ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.