ADVERTISEMENT

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ತರಾಟೆ

ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 15:26 IST
Last Updated 11 ಜನವರಿ 2022, 15:26 IST
ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ
ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ   

ಬೆಂಗಳೂರು: ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವೆ ಸಂಪರ್ಕ ಕಲ್ಪಿಸುವ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾರ್ಯದ ವಿಳಂಬಕ್ಕೆ ಹೈಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಈ ಸಂಬಂಧ ಕೋರಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಕಾಮಗಾರಿ ಪೂರ್ಣಗೊಳಿಸಲು ಭೂ ಸ್ವಾಧೀನ, ಮರಗಳ ತೆರವು ಸೇರಿದಂತೆ ಅನೇಕ ಅಡಚಣೆಗಳಿದ್ದವು. ಈಗ ಅವೆಲ್ಲಾ ನಿವಾರಣೆಯಾಗಿವೆ. ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಆದಷ್ಟು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಕುರಿತ ವಿವರವಾದ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ಮನವಿ ಮಾಡಿದರು.

ADVERTISEMENT

ಈ ಮನವಿಯನ್ನು ಒಪ್ಪದ ನ್ಯಾಯಪೀಠ, ‘ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಕುರಿತಂತೆ ಈ ಹಿಂದಿನ ವಿಚಾರಣೆಯಲ್ಲೇ ಪ್ರಮಾಣಪತ್ರ ಸಲ್ಲಿಸಿ ಎಂದು ಸೂಚನೆ ನೀಡಲಾಗಿತ್ತು. ಆದರೆ, ಇಷ್ಟು ದಿನವಾದರೂ ಪ್ರಮಾಣಪತ್ರ ಸಲ್ಲಿಸಿಲ್ಲ’ ಎಂದು ಕಿಡಿ ಕಾರಿತು.

‘ಮೇಲ್ಸೇತುವೆಯನ್ನು ಯಾವಾಗಪೂರ್ಣಗೊಳಿಸಲಾಗುತ್ತದೆ ಎಂಬ ಬಗ್ಗೆಒಂದು ವಾರದಲ್ಲಿ ವಿವರವಾದ ವರದಿಯನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಿ. ಇಲ್ಲವಾದರೆ ಮುಖ್ಯ ಆಯುಕ್ತರೇ ಖುದ್ದು ಕೋರ್ಟ್‌ಗೆ ಹಾಜರಾಗಬೇಕು’ ಎಂದು ಕಟ್ಟುನಿಟ್ಟಾಗಿ ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.